ಸ್ಟೂಡೆಂಟುಗಳ ಸ್ವತಂತ್ರ ಮನ!

 ಬಹುಕಾಲದಿಂದ ನನ್ನಲ್ಲಿ ಉಳಿದಿರುವ ಒಂದು ವಿಸ್ಮಯಕರ ಅಕಡೆಮಿಕ್ ಚಿತ್ರ ಇದು: 

ಈ ಪ್ರಸಂಗ ನಡೆದಿದ್ದು ೧೯೨೯ರಲ್ಲಿ. ತತ್ವಜ್ಞಾನಿ ಲುಡ್ವಿಗ್ ವಿಟ್‌ಗನ್ ಸ್ಟೈನ್ ಕೇವಲ ಇಪ್ಪತ್ತೇಳು ಪುಟದ ಥೀಸಿಸ್ ಬರೆದ. ಅವನ ಥೀಸಿಸ್ಸಿನ ಮೌಲ್ಯಮಾಪಕರು ಆ ಕಾಲದ ಇಂಗ್ಲಿಷ್ ಫಿಲಾಸಫರ್ ಜಿ.ಇ. ಮೂರ್ ಹಾಗೂ ವಿಟಗನ್ ಸ್ಟೈನನ ಡಾಕ್ಟರಲ್ ಗೈಡ್ ಆಗಿದ್ದ ತತ್ವಜ್ಞಾನಿ ಬರ್ಟ್ರಂಡ್ ರಸೆಲ್.  

ಒಂದು ಕಾಲಕ್ಕೆ ಅಕಡೆಮಿಕ್ ವಲಯಗಳ ಪರಿಚಿತ ಪ್ರಸಂಗ ಇದು: ಥೀಸಿಸ್ಸಿನ ಮೌಖಿಕ ಪರೀಕ್ಷೆಯ ದಿನ ವಿಟ್‌ಗನ್ ಸ್ಟೈನ್ ಮೌಲ್ಯಮಾಪಕರ ಭುಜ ತಟ್ಟುತ್ತಾ ಹೇಳಿದ: ‘ಡೋಂಟ್ ವರಿ. ಐ ನೋ ಯು ವಿಲ್ ನೆವರ್ ಅಂಡರ್ ಸ್ಟ್ಯಾಂಡ್ ಇಟ್.’ (ತಲೆ ಕೆಡಿಸ್ಕೋಬೇಡಿ. ಇದು ನಿಮಗೆ ಎಂದೂ ಅರ್ಥವಾಗಲ್ಲ ಅಂತ ನಂಗೊತ್ತು.’) 

ಈ ಮೌಲ್ಯಮಾಪಕರ ಬಗ್ಗೆ ವಿಟ್‌ಗನ್ ಸ್ಟೈನನನಿಗೆ ಗೌರವವಿರಲಿಲ್ಲ ಎಂದಲ್ಲ. ಆಗ ಚಾಲ್ತಿಯಲ್ಲಿದ್ದ ತತ್ವಜ್ಞಾನದ ಥಿಯರಿಗಳನ್ನು ಮಾತ್ರ ಬಲ್ಲ ಅವರಿಗೆ ತನ್ನ ‘ಪಿಕ್ಚರ್ ಥಿಯರಿ ಅಪ್ರೋಚ್’ ಗ್ರಹಿಸಲು ಸಾಧ್ಯವಿರಲಿಲ್ಲ ಎಂಬುದು ಅವನ ನಿಲುವಾಗಿತ್ತು. 

ಇದಕ್ಕೂ ಮೊದಲು, ಬರ್ಟ್ರಂಡ್ ರಸೆಲ್ ತನ್ನ ಡಾಕ್ಟರಲ್ ಗೈಡ್ ಆದ ಕೆಲವೇ ವಾರಗಳಲ್ಲಿ ವಿಟ್‌ಗನ್ ಸ್ಟೈನನಿಗೆ ತಾನು ರಸೆಲ್‌ನಿಂದ ಕಲಿಯುವುದು ಏನೂ ಇಲ್ಲ ಎನ್ನಿಸಿತ್ತು. ಈ ಮಾತನ್ನು ಹಿಂದೊಮ್ಮೆ ರೇಮಾಂಕ್ ಬರೆದ ವಿಟ್‌ಗನ್ ಸ್ಟೈನನ ಜೀವನ ಚರಿತ್ರೆ ‘ಡ್ಯೂಟಿ ಆಫ್ ಎ ಜೀನಿಯಸ್’ನಲ್ಲಿ ಓದಿದ್ದು ನೆನಪಾಯಿತು. 

ಮೇಲೆ ಹೇಳಿದ ಮೌಖಿಕ ಪರೀಕ್ಷೆಯ ನಂತರ ಪ್ರೊಫೆಸರ್‍ ಮೂರ್ ಟಿಪ್ಪಣಿ ಬರೆದ: ‘ಪಿಎಚ್.ಡಿ.ಯ ಸಾಮಾನ್ಯ ಅಗತ್ಯಗಳನ್ನು ಇದು ಪೂರೈಸದಿದ್ದರೂ ಇದು ಒಬ್ಬ ಜೀನಿಯಸ್‌ನ ಕೃತಿ.’ ಮೌಖಿಕ ಪರೀಕ್ಷೆಯ ನಂತರವೂ ಮೂರ್‍ ಹಾಗೂ ರಸೆಲ್ ಜೊತೆ ವಿಟ್‌ಗನ್ ಸ್ಟೈನ್ ಸಂಬಂಧ ಆರಾಮಾಗೇ ಇತ್ತು.  

ಅವತ್ತು ವಿಟ್‌ಗನ್ ಸ್ಟೈನ್ ಡಾಕ್ಟರೇಟ್ ಪಡೆದ. ಇವತ್ತು ಲೋಕದ ದೊಡ್ಡ ಆಧುನಿಕ ಫಿಲಾಸಫರುಗಳ ಜೊತೆಗೆ ಅವನೂ ಇದ್ದಾನೆ. ಅವತ್ತು ಚರ್ಚೆಯಲ್ಲಿದ್ದ ಇಪ್ಪತ್ತೇಳು ಪುಟದ Tractatus Logico-Philosophicus ಈ ಪರೀಕ್ಷೆಗಿಂತ ಏಳು ವರ್ಷಗಳ ಮೊದಲೇ ಪ್ರಕಟವಾಗಿತ್ತು. ಅದು ಪಿಎಚ್.ಡಿ. ಪೂರ್ವ ಡಿಸರ್ಟೇಶನ್ನೋ ಅಥವಾ ಥೀಸಿಸ್ಸೋ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳೂ ಇವೆ. 
ಪಶ್ಚಿಮದಲ್ಲಿ ಇಂಥ ಘಟನೆಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಒಂದು ಕಾಲಕ್ಕೆ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡನಿಂದ ಕಲಿತಿದ್ದ ಕಾರ್ಲ್ ಯೂಂಗ್ ಫ್ರಾಯ್ಡ್‌ನ ಥಿಯರಿಗಳನ್ನು ವಿಮರ್ಶಿಸಿ ಮುಂದೆ ಪ್ರಕಟಿಸಿದ ಶೋಧನೆಗಳು ಫ್ರಾಯ್ಡನನ್ನು ಕಂಗೆಡಿಸಿದವು. ಇಂಥ ಪ್ರಸಂಗಗಳು ಎಲ್ಲ ಕಡೆಯೂ ಇರಬಹುದು. 

ಇವೆಲ್ಲ ಮೊನ್ನೆ ನೆನಪಾಗಲು ಕಾರಣವಿತ್ತು: ಈಚಿನ ಒಂದು ಸಂಧ್ಯಾಭೇಟಿಯಲ್ಲಿ ಚಿಕ್ಕನಾಯಕನಹಳ್ಳಿಯ ಕಡೆಯ ಗೆಳೆಯನೊಬ್ಬ ತನ್ನ ಎಂ.ಎ. ಕ್ಲಾಸ್ ರೂಮ್ ಅನುಭವ ಹೇಳತೊಡಗಿದಂತೆ, ಈ ಅಂಕಣಕಾರನ ಅಲೆಯುವ ಮನ ಕ್ಲಾಸುರೂಮುಗಳ ಅನುಭವದ ಸುತ್ತ ಅಡ್ಡಾಡತೊಡಗಿತು; ವಿಟ್‌ಗನ್ ಸ್ಟೈನ್ ಪ್ರಸಂಗ ನೆನಪಾಯಿತು. 

ಅವತ್ತು ಗೆಳೆಯ ಹೇಳಿದ ಅನುಭವ ಇದು:

ಎಂ.ಎ.ತರಗತಿಯಲ್ಲಿ ಮೇಷ್ಟ್ರು ಉತ್ಸಾಹದಿಂದ ಅದೇ ಆಗ ಆ ಜನಪದ ತ್ರಿಪದಿಯೊಂದರ ಹೊಸ ವ್ಯಾಖ್ಯಾನ ಹೊಳೆದವರಂತೆ ವರ್ಣಿಸುತ್ತಿದ್ದರು. ಅದೊಂದು ಚಿರಪರಿಚಿತ ತ್ರಿಪದಿ:  
ಬಾಲಕರಿಲ್ಲದ ಬಾಲೀದ್ಯಾತರ ಜನ್ಮ 
ಬಾಡೀಗಿ ಎತ್ತು ದುಡಿದ್ಹಾಂಗI
ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಾಂಗ 

ಈ ಪದ್ಯ ಉಲ್ಲೇಖಿಸಿದ ಮೇಷ್ಟ್ರು ಹೇಳಿದರು: ‘ನೋಡಿ, ಈ ಜನಪದ ಮನಸ್ಸು ಹೇಗಿದೆ ಅಂದರೆ, ಗಂಡು ಮಗುವಾದರೆ ಮಾತ್ರ ಜೀವನ ಸಾರ್ಥಕ ಎಂದು ಈ ತ್ರಿಪದಿ ಹೇಳುತ್ತಿದೆ. ಅಂದರೆ ಹೆಣ್ಣು ಮಗುವಿನ ಬಗ್ಗೆ, ಒಟ್ಟಾರೆ ಹೆಂಗಸರ ಬಗ್ಗೆ, ಜನಪದರ ಧೋರಣೆ ಇಲ್ಲಿ ವ್ಯಕ್ತವಾಗುತ್ತಿದೆ…’ 

ಆಗ, ಮೇಲೆ ಪ್ರಸ್ತಾಪಿಸಿದ ಗೆಳೆಯ ಮೇಲೆದ್ದು ತನ್ನದೊಂದು ರೀಡಿಂಗ್ ಕೊಟ್ಟ: 
‘ಸಾರ್, ಜನಪದರಿಗೆ ಸಾಮಾನ್ಯವಾಗಿ ಮಹಿಳೆಯರ ಬಗ್ಗೆ ಗೌರವ ಇರುತ್ತದೆ. ಮಹಿಳೆಯರ ಕಷ್ಟಗಳ ಬಗೆಗೆ ಜನಪದರು ಹತ್ತಾರು ಕಡೆ ಬರೆದಿದ್ದಾರೆ. ಇಲ್ಲಿ ‘ಬಾಲಕ’ ಎಂದರೆ ಒಟ್ಟಾರೆಯಾಗಿ ‘ಮಕ್ಕಳು’ ಎಂಬರ್ಥದಲ್ಲಿ ಹೇಳಿರುವ ಸಾಧ್ಯತೆಯೂ ಇದೆ. ‘ಮಕ್ಕಳಿಲ್ಲದವರ ಜನ್ಮ ಸಾರ್ಥಕವಾಗದು’ ಎಂಬ ಸಾಮಾನ್ಯ ಅರ್ಥವೂ ಇಲ್ಲಿದೆ. ಬಾಲಕ, ಬಾಳು, ಬಾಳೆಲೆ ಬಾಡಿಗೆ…ಹೀಗೆ ‘ಬಾ’ ದ ಅನುಪ್ರಾಸದ ಮೋಹವೂ ಇಲ್ಲಿದೆ…ನಮ್ಮ ಜನಪದರ ಭಾಷೆಯಲ್ಲಿ ‘ಮನುಷ್ಯ’ ಎಂದರೆ ಗಂಡು, ಹೆಣ್ಣು ಎರಡೂ ಸೇರಿರುತ್ತವೆ… ಆದ್ದರಿಂದ ಈ ತ್ರಿಪದಿಯಲ್ಲಿ ಬಾಲಕ ಎಂದರೆ ಬಾಲಕಿಯೂ ಅದರೊಳಗೆ ಸೇರಿದ್ದಾಳೆ ಎಂಬ ಸ್ಥೂಲ ಗ್ರಹಿಕೆಯಿಂದಲೂ ಈ ತ್ರಿಪದಿಯಲ್ಲಿ ‘ಬಾಲಕರಿಲ್ಲಾದ’ ಎಂಬ ಬಣ್ಣನೆ ಬಂದಿರಬಹುದು.’

ಮೇಷ್ಟರಿಗೆ ಈ ವಿಭಿನ್ನ ಓದು ಹಿಡಿಸಲಿಲ್ಲ. 

ಮೇಷ್ಟ್ರು: ಯಾವೂರು ತಮ್ಮದು?

ವಿದ್ಯಾರ್ಥಿ: ಚಿಕ್ಕನಾಯಕನಹಳ್ಳಿ

‘ಮತ್ತೇನು! ದೊಡ್ಡನಾಯಕನ ಹಳ್ಳಿಯವರ ಥರ ಮಾತಾಡುತ್ತಿದ್ದೀರಲ್ಲ!’ ಎಂದು ಮೇಷ್ಟ್ರು ವ್ಯಂಗ್ಯವಾಡಿ, ನಕ್ಕು ನಗಿಸಲೆತ್ನಿಸಿದರು. 

ಮೇಷ್ಟರ ರೀಡಿಂಗಿನಲ್ಲಿ ಅಂಥ ತಪ್ಪಿರಲಿಲ್ಲ. ಮೇಲುನೋಟಕ್ಕೆ ತ್ರಿಪದಿ ಅವರು ಹೇಳುತ್ತಿರುವ ಆರ್ಥವನ್ನೇ ಕೊಡುತ್ತದೆ. ಕ್ಲಾಸಿನಲ್ಲಿ ಫೆಮಿನಿಸ್ಟ್ ಥಿಯರಿಗಳನ್ನು ಪಾಠ ಮಾಡುವಾಗ ಈ ಅಂಕಣಕಾರನೂ ಆ ತ್ರಿಪದಿಯನ್ನು ಹಾಗೇ ಓದಿದ್ದ. ಆದರೂ ವಿದ್ಯಾರ್ಥಿಯೊಬ್ಬ ಕೊಟ್ಟ ಮೇಲಿನ ವ್ಯಾಖ್ಯಾನ ಕುತೂಹಲಕರವಾಗಿತ್ತು. ಮೇಷ್ಟರು ಅದನ್ನೂ ಚರ್ಚೆಗೆ ಕೈಗೆತ್ತಿಕೊಳ್ಳಬಹುದಾಗಿತ್ತು. ಆಗ ಅವರೂ ಬೆಳೆದು, ವಿದ್ಯಾರ್ಥಿಯನ್ನೂ ಬೆಳೆಸುವ ಸಾಧ್ಯತೆಯಿತ್ತು! 

ಅಷ್ಟಿಷ್ಟು ಬುದ್ಧಿ ಬಂದ ಕಾಲದಿಂದ ಇವತ್ತಿನವರೆಗೂ ಕ್ಲಾಸ್ ರೂಂ, ಸ್ಟೂಡೆಂಟ್ಸ್, ಟೀಚಿಂಗ್  ಇವುಗಳ ಲೋಕದಲ್ಲೇ ಇರುವ ನನಗಂತೂ ಸ್ಟೂಡೆಂಟುಗಳ ಸ್ವತಂತ್ರ ವ್ಯಾಖ್ಯಾನಗಳು ಚಕಿತಗೊಳಿಸುತ್ತಲೇ ಇರುತ್ತವೆ. ನನ್ನನ್ನು ಬೆಳೆಸುತ್ತಲೇ ಇರುತ್ತವೆ. ಒಮ್ಮೆ ಸುಜನಾ ಅವರು ಸುಂದರವಾಗಿ ಕನ್ನಡಿಸಿರುವ ಸೊಫೋಕ್ಲಿಸನ ‘ಎಜಾಕ್ಸ್’ ಹಾಗೂ ಬಿಎಂಶ್ರೀಯವರ ‘ಅಶ್ವತ್ಥಾಮನ್’ ನಾಟಕಗಳನ್ನು ತೌಲನಿಕವಾಗಿ ಪಾಠ ಮಾಡುತ್ತಿದ್ದ ಕಾಲದಲ್ಲಿ ಟ್ರ್ಯಾಜಿಡಿ, ದುರಂತ ನಾಟಕ ಇತ್ಯಾದಿಗಳ ಬಗ್ಗೆಯೆಲ್ಲಾ ಹೇಳಿ ವಿಶ್ಲೇಷಣೆ ಮುಂದುವರಿಸಿದ್ದೆ. ಒಂದೆರಡು ಮೂರು ಕ್ಲಾಸುಗಳ ನಂತರ ಜಾಣ ಹುಡುಗಿ ಧನಲಕ್ಮಿ, ‘ಸಾರ್‍! ಸುಜನಾ ಅವರ ಅನುವಾದದಲ್ಲಿ ಈ ದುರಂತ ನಾಟಕದ ಕೊನೆಗೆ ‘ಮಂಗಳಂ’ ಹಾಕಿದ್ದಾರಲ್ಲ!’ ಎಂದಳು. ಅಸಲಿಗೆ ಆ ನಾಟಕ ಓದಿ ಟೀಚ್ ಮಾಡುತ್ತಿದ್ದ ನಾನೇ ಅದನ್ನು ಗಮನಿಸಿರಲಿಲ್ಲ. ತಕ್ಷಣ ಉತ್ತರ ಹೊಳೆಯಲಿಲ್ಲ. ಆಮೇಲೆ, ಭಾರತೀಯ, ಕನ್ನಡ ನಾಟಕಗಳ ಕೊನೆಗೆ ‘ಮುಕ್ತಾಯ’ ಎಂಬುದಕ್ಕೆ ‘ಮಂಗಳಂ’ ಬಳಸುವುದರಿಂದ ಸುಜನಾ ಆ ಅರ್ಥದಲ್ಲಿ ಬಳಸಿರಬಹುದು ಎಂದ ನೆನಪು.   

ಮುಂದೊಮ್ಮೆ ಈ ಬಗ್ಗೆ ಯೋಚಿಸುತ್ತಿದ್ದಾಗ ‘ಟ್ರ್ಯಾಜಿಡಿ’ ಎಂಬ ಪದಕ್ಕೆ ಕನ್ನಡದ ದುರಂತ, ದುಃಖಾಂತ ಸರಿಯಾದ ಸಂವಾದಿ ಪದಗಳಲ್ಲ ಎನ್ನಿಸಿದೆ. ಈ ಬಗ್ಗೆ ಹಿಂದಿನ ಅಂಕಣವೊಂದರಲ್ಲಿ ಬರೆದ 'ಟ್ರ್ಯಾಜಿಡಿಯ ದೇಶೀ ಸ್ವೀಕಾರ’ ಎಂಬ ಲೇಖನದ ವಿವರಗಳು ನಿಮಗೆ ನೆನಪಿರಬಹುದು: 

'ಟ್ರ್ಯಾಜಿಡಿ’ ಎಂಬ ಪದ ಗ್ರೀಕ್ ಭಾಷೆಯ 'ಟ್ರ್ಯಾಗೋಡಿಯಾ’ ಎಂಬ ಪದದಿಂದ ಹುಟ್ಟಿದೆ. 'ಟ್ರ್ಯಾಗೋಡಿಯಾ’ ಎಂಬ ಪದ 'ಸಾಂಗ್ ಆಫ್ ದ ಗೋಟ್’ ಎಂಬುದರಿಂದ ಹುಟ್ಟಿದೆ. 'ಸಾಂಗ್ ಆಫ್ ದ ಗೋಟ್’ನ ಹಿನ್ನೆಲೆ ಇದು: ಗ್ರೀಕರು ಕಾಳ ಶಕ್ತಿಗಳ ದೇವತೆ ಡಯೋನಿಸಿಸ್‌ನ ಪೂಜೆಯಲ್ಲಿ ಒಂದು ಗೋಟ್ (ಆಡು) ಬಲಿಕೊಡುತ್ತಿದ್ದರು. ಬಲಿಯಾಗುವ ಆಡಿನ ಆಕ್ರಂದನವೇ 'ಟ್ರ್ಯಾಗೋಡಿಯಾ’ ಆಯಿತು. ಇದು ನಾಟಕ ಪ್ರಕಾರವಾದಾಗ 'ಟ್ರ್ಯಾಜಿಡಿ’ ಆಯಿತು 'ಟ್ರ್ಯಾಗೋಡಿಯಾ’ದ ಅಕ್ಷರಶಃ ಕನ್ನಡಾನುವಾದ: 'ಆಡಿನ ಹಾಡು.’ 

ಈ ಹಿನ್ನೆಲೆಯಲ್ಲಿ 'ಟ್ರ್ಯಾಜಿಡಿ’ ಪದದ ಅನುವಾದದ ಅಪೂರ್ಣತೆಯ ಪ್ರಶ್ನೆ ಹಾಗೇ ಉಳಿಯುತ್ತದೆ. ಅದರಲ್ಲೂ ಮುಖ್ಯವಾಗಿ ಭಾರತೀಯ ಭಾಷೆಗಳಲ್ಲಿ 'ಟ್ರ್ಯಾಜಿಡಿ’ಗೆ ಕೊಟ್ಟಿರುವ ಸಂವಾದಿ ಪದಗಳು ನಾಟಕದ ಅಂತ್ಯವನ್ನೇ ಹೆಚ್ಚು ಸೂಚಿಸುವಂತಿರುವುದರಿಂದ ಕೂಡ ಈ ಅಪೂರ್ಣತೆ ಎದ್ದು ಕಾಣುತ್ತದೆ. ಆದರೆ ಒಂದು ಶತಮಾನದಷ್ಟು ದೀರ್ಘ ಕಾಲ ಸಂಸ್ಕೃತಿಗಳಲ್ಲಿ ಉಳಿದು, ಬೇರು ಬಿಟ್ಟ ಪದಗಳನ್ನು ಕದಲಿಸುವುದು, ಬದಲಿಸುವುದು ಕಷ್ಟ. ಆದ್ದರಿಂದ ’ಟ್ರ್ಯಾಜಿಡಿ’ ಎನ್ನುವುದು ದುಃಖಮಯ ಅಂತ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದು ಜೀವನವನ್ನು, ಅದರಲ್ಲೂ ದುಃಖವನ್ನು, ಗಂಭೀರವಾಗಿ ನೋಡುವ, ಅರಿಯುವ ಕ್ರಮ ಎಂಬುದನ್ನು ಕ್ಲಾಸುಗಳಲ್ಲಿ, ರಂಗಭೂಮಿಯಲ್ಲಿ, ಸಾಂಸ್ಕೃತಿಕ ಚರ್ಚೆಗಳಲ್ಲಿ ಹೊಸ ಹೊಸ ತಲೆಮಾರುಗಳಿಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತಲೇ ಇರಬೇಕಾಗುತ್ತದೆ.
ಇದೆಲ್ಲ ತಡವಾಗಿ ಬಂದ ಬೆಳಕು! ಅವತ್ತು ಆ ಹುಡುಗಿ ಪ್ರಶ್ನೆ ಕೇಳಿದ ನಂತರ ಎನ್.ಎಸ್.ಡಿ.ಯಲ್ಲಿ ನಾಟಕದ ಕೋರ್ಸ್ ಕೋಡುತ್ತಿರುವಾಗ ರಂಗಭೂಮಿಯ ನವ ನಟಿ-ನಟರ ಜೊತೆ ಮಾತಾಡುತ್ತಾ ಹುಟ್ಟಿದ ಯೋಚನೆಗಳು. ಟೀಚಿಂಗ್ ಎಂದರೆ ಕಲಿಕೆ ಎಂಬ ನನ್ನ ಪುಟ್ಟ ಜ್ಞಾನೋದಯ ಕೂಡ ಹೀಗೇ ನಡೆಯುವಾಗ ಎಡವಿ ಆದದ್ದು! 

ಈ ಥರ ಕ್ಲಾಸ್‌ರೂಮಿನಲ್ಲಿ ಪಡೆದ ಈ ನಡುವೆ ಕೂಡ ಮೇಲೆ ಹೇಳಿದ ಮೇಷ್ಟರಂತೆ ತಕ್ಷಣದ ಠೇಂಕಾರದಲ್ಲಿ ನಾನೂ ಸ್ಟೂಡೆಂಟುಗಳ ಸ್ವತಂತ್ರ ವ್ಯಾಖ್ಯಾನಗಳನ್ನು ಉಪೇಕ್ಷಿಸಿರಬಹುದು! ಅಂಥ ಎಡಹುಗಳಿದ್ದರೆ ಮಾಫಿ ಇರಲಿ; ‘ಸರ್ವರೊಳಗೊಂದೊಂದು ನುಡಿ ಕಲಿ’ಯಲು ಇನ್ನೂ ಟೈಮಿದೆ!

ಕೊನೆ ಟಿಪ್ಪಣಿ: ಪಠ್ಯ ವಿಸ್ತರಣಾ ಪ್ರತಿಭೆ!

ಕಲಿಸು ಬಾಗುವುದನ್ನು; ಬಾಗದೆ ಸೆಟೆವುದನ್ನು …
ಆದರು ಕಲಿತಿಲ್ಲವೆಂಬ ನೆನಪುಳಿಸು 

ಇದು ಗೋಪಾಲ ಕೃಷ್ಣ ಅಡಿಗರ ‘ಪ್ರಾರ್ಥನೆ’ ಪದ್ಯದ ನನ್ನ ಮೆಚ್ಚಿನ ಸಾಲುಗಳಲ್ಲೊಂದು. ಕಳೆದ ವಾರ ಈ ಅಂಕಣದಲ್ಲಿ ಬರೆದ ‘ಓದದ ಪುಸ್ತಕಗಳ ಭಯ’ ಲೇಖನಕ್ಕೆ ಬಂದ ಹಲ ಬಗೆಯ ವಿಸ್ತಾರಗಳು ಅಡಿಗರ ಸಾಲನ್ನು ನೆನಪಿಸಿದವು: ಓದದ ಪುಸ್ತಕಗಳ ಬಗೆಗಿನ ಐಡಿಯಾಗಳನ್ನು ವಿಸ್ತಾರ ಮಾಡಿದ ಎಂ.ಎ. ಇಂಗ್ಲಿಷ್ ವಿದ್ಯಾರ್ಥಿ ಚರಣ್, ಪಿ.ಎಚ್.ಡಿ. ವಿದ್ಯಾರ್ಥಿ ಸೋಮಶಂಕರ ಸುಣ್ಣಂಗೂರು, ಗುಲಬರ್ಗಾ ಸೆಂಟ್ರಲ್ ಯೂನಿವರ್ಸಿಟಿಯ ನನ್ನ ವಿದ್ಯಾರ್ಥಿನಿ-ಈಗಿನ ಇಂಗ್ಲಿಷ್ ಮೇಡಂ- ಮಹಾಂತ, ಕವಯಿತ್ರಿ ಪುಷ್ಪ…ಇವರಿಂದ ಶುರುವಾಗಿ ಗೆಳೆಯರಾದ ಜೆ. ಶಾಮರಾವ್, ಕೆ.ಪುಟ್ಟಸ್ವಾಮಿ, ಕಾಮ್ರೇಡ್ ಬಿ. ಸುರೇಶ್, ಗುರುಪ್ರಸಾದ್ ಕಂಟಲಗೆರೆ, ಗುರು ಜಗಳೂರು, ನಿರಂಜನ್, ಬಂಜಗೆರೆ ಜಯಪ್ರಕಾಶ್, ವಿಶುಕುಮಾರ್‍ ಈ ಎಲ್ಲರೂ ಕೊಟ್ಟ ಚುರುಕು ನೋಟಗಳಿಗೆ; ಈ ಎಲ್ಲರ ಪಠ್ಯ ವಿಸ್ತರಣಾಪ್ರತಿಭೆಗೆ ಶರಣು!  
ಈ ಹಿಂದೆ ಹಲವು ಸಲ ನೆನೆದಂತೆ ‘ನೀನು ಬೆಳೆದರೆ ನಾನು ಬೆಳೆವೆ'! 

 

Share on:

Comments

5 Comments



| ದೊಡ್ಡಿಶೇಖರ್

ಸರ್, ನಿಮ್ಮ ಕಳೆದ ಅಂಕಣಕ್ಕೆ ಬಂದಿರುವ ಪ್ರತಿಕ್ರಿಯೆಯನ್ನು ನೋಡಲು ಸಾಧ್ಯವಾದರೆ ಅನುಕೂಲವಷ್ಟೇ.


| Admin/ Gaalibelaku.com

Simple. Visit: ಮನುಜರ ಮೇಲೆ ಬರೆಯುವುದು! | Daily Blogs | Nataraj Huliyar https://natarajhuliyar.com/dailyblogs/harihara-keats-shelly


| Nanjaiah

ಅರ್ಥಪೂರ್ಣ ಬರಹ. ಧನ್ಯವಾದಗಳು


| ಮಹಾಂತ

ಅರಿವಿನ ಹಣತೆ ನಂದುವುದೆ ಇಲ್ಲ ಸರ್, ನನಗೆ ನೀವು ಪಾಠ ಮಾಡುತ್ತಿದ್ದ ರೀತಿ ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. I think those classes influenced a lot in shaping my personality. I still remember that particular class where you were teaching Shakespeare's sonnet, "shall I compare the to a summers day" in western culture summer is a beautiful season, irony is in Gulbarga or many part of north Karnataka places, summer is never felt beautiful, it is a cruel season, u highlighted that and I got convinced because in my plus two I had the same sonnet, but never got satisfied with explanation - I understood that day that metaphors are very much influenced by the culture , literature itself...one day I was taking a class for MBA students (business communication) I know someone from core literature background person, it is highly challenging to take classes on dry subjects like communication, however I did little bit of experiments using my literature knowledge I told my students to do presentation on their own topic, ತುಂಬಾ ಜನ‌ ವಿದ್ಯಾರ್ಥಿಗಳು ನಾನು ನಿರೀಕ್ಷಿಸಿದ ರೀತಿಯಲ್ಲೆ ಅವೆ marketingಗೆ ಸಂಬಂಧಿಸಿದ, tradeಗೆ ಸಂಬಂಧಿಸಿದಂತೆ, ದೊಡ್ಡ ದೊಡ್ಡ investmentಗಳಿಗೆ ಸಂಬಂಧಿಸಿದಂತೆ topic ಮೇಲೆ presentationಮಾಡಿದ್ರು, ಆದರೆ ಒಂದು team ಮಾತ್ರ ಸ್ವಲ್ಪ ಭಿನ್ನವಾದದ್ದನ್ನು ತಂದು ತೋರಿಸಿದ್ರು ಅದೆನೆಂದದರೆ Indian tribes and their contribution to the society, for it was very surprising, usually business students don't care about such topics, ಅವರ conversationಇನ್ನೂ interesting ಆಗಿ ಇತ್ತು, they started with "how do you feel when someone snathes your food and land" the reply was even more interesting, and thought provoking -what if there is no land to be snatched away" so that question symbolically saying so many things about the conditions of marginalized, exploited in the name of development... So sir, ನಿಮ್ಮ ಬರವಣಿಗೆ ಸೂಚಿಸುವಂತೆ ಸ್ವತಂತ್ರ ಚಿಂತನೆ ಎಷ್ಟು ಮುಖ್ಯವಾಗುತ್ತದೆ, ಅದು ಯಾರೆ ಆಗಿರಲಿ ವಿದ್ಯಾರ್ಥಿ ಅಥವಾ ಗುರು, ಹೊಸ ಹೊಸ insightಗಳು ಪುಳಕಿತ ಗೊಳಿಸುತ್ತಲೆ ಇರುತ್ತವೆ, ಹೊಸ ವಿಚಾರಕ್ಕೆ ಪ್ರೇರಣೆ ಯಾಗುತ್ತಲೆ ಇರುತ್ತವೆ, ಅಷ್ಟೆ ನಾವು ನಿರಂತರ ಕಲಿಕೆಗೆ ತೆರದುಕೊಂಡಿರಬೇಕು...ನಿಮ್ಮ ಬರಹಗಳು ತುಂಬಾ connect ಆಗುತ್ತವೆ ಸರ್, I always take pride in the legacy I come from which motivates me for life long learning, listening... ತಮಗೆ ಮಗದೊಮ್ಮೆ ಅನಂತ ಶರಣು


| T B Mahlingiah

Sir Jagatika Author Neevu Nimma Bahushrutvakke Jagattina sahitya. Sanskruti Rajakaranada Paripakva parignanada bagge Nanna Namaskaragalu. Sir




Add Comment


Mundana Kathana Nataka

YouTube






Recent Posts

Latest Blogs