ಅಳುವ ಕಣ್ಣು; ಬೆರಗು ಗಣ್ಣು

ಹೆಣ್ಣನ್ನು ಕುರಿತ ಈ ಎರಡೂ ಪುರಾಣ ಕತೆಗಳು ಗ್ರೀಕ್ ಸಂಸ್ಕೃತಿಯಲ್ಲೇ ಹುಟ್ಟಿವೆ. ಒಂದು ಪಂಡೋರಾಳ ಪೆಟ್ಟಿಗೆ. ಎರಡನೆಯದು ನಿಯೋಬಿಯ ಕಡು ದುಃಖ.  

ಈ ಪುರಾಣಕತೆಗಳನ್ನು ಮತ್ತೆ ಇಂಗ್ಲಿಷಿನಲ್ಲಿ ಓದಿ ನೋಡಿ, ನನ್ನ ಪ್ರಿಯ ಕನ್ನಡ ಪುಸ್ತಕಗಳಲ್ಲಿ ಒಂದಾದ ’ಗ್ರೀಕ್ ಮಿಥಕಗಳು’ ಪುಸ್ತಕಕ್ಕಾಗಿ ತಡಕಾಡಿದೆ. ಮನೆಯಲ್ಲಿ ಅಪ್ಪ-ಮಗ ಇಬ್ಬರೂ ಮತ್ತೆ ಮತ್ತೆ ಓದಿ ಆನಂದ ಪಟ್ಟಿದ್ದ ಪುಸ್ತಕದ ಗಾಢ, ರೋಮಾಂಚಕ ಗುರುತುಗಳು ಈ ಇಬ್ಬರಲ್ಲೂ ಇನ್ನೂ ಇವೆ.  ಈ ಪುಸ್ತಕ ರೂಪಿಸಿದ ಕನ್ನಡದ ಅಪರೂಪದ ಗ್ರೀಕ್ ಸಾಹಿತ್ಯದ ಸ್ಕಾಲರ್‍, ಇಂಗ್ಲಿಷ್ ಪ್ರೊಫೆಸರ್‍, ಕೆ.ಎಂ. ಸೀತಾರಾಮಯ್ಯ ಹಾಸನದಲ್ಲಿ ಕಿ.ರಂ. ನಾಗರಾಜರ ಮೇಷ್ಟರಾಗಿದ್ದರು.  ಕಿ.ರಂ. ತಮ್ಮ ಮೇಷ್ಟರು ಮಾಡಿದ ಹೋಮರನ ‘ಇಲಿಯಡ್’ ಅನುವಾದ ’ಟ್ರೋಜನ್ ಯುದ್ಧ’ವನ್ನು ಪ್ರೀತಿಯಿಂದ ಪ್ರಕಟಿಸಿದ್ದರು.  
೧೯೯೭ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ‘ಗ್ರೀಕ್ ಮಿಥಕಗಳು’ ಪುಸ್ತಕವನ್ನು ಹೊಸ ಪುಸ್ತಕವೊಂದನ್ನು ಬರಸೆಳೆಯುವಂತೆ ರೋಮಾಂಚನದಿಂದ ಕೈಗೆತ್ತಿಕೊಂಡೆ; ಪುಸ್ತಕದ ಹಾಳೆಗಳು ಕಿತ್ತುಕೊಂಡು ಹೊರ ಬಂದಿದ್ದವು. ಅದೃಷ್ಟಕ್ಕೆ ಅವು ತಂತಮ್ಮ ಜಾಗದಲ್ಲೇ ಇದ್ದವು!

ಹೆಣ್ಣನ್ನು ಕುರಿತ ಈ ಎರಡು ಕತೆಗಳಲ್ಲಿ ಯಾವುದು ಮೊದಲು ಬಂತು, ಯಾವುದು ನಂತರ ಬಂತು ಎಂದು ಹೇಳುವುದು ಕಷ್ಟ. 

ಮೊದಲಿಗೆ, ಪಂಡೋರ ಕತೆಯ ಸಾರ:

ಸ್ಯೂಸ್ ದೇವ ಗ್ರೀಕ್ ದೇವತೆಗಳ ಮಹಾರಾಜ. ಪ್ರಮೀಥಿಯಸ್ ಎಂಬ ಗ್ರೀಕ್ ದೇವತೆ ಈ ದೇವಲೋಕದಲ್ಲಿ ಒಬ್ಬ ಭಿನ್ನಮತೀಯ. ಭೂಲೋಕದ ಮನುಷ್ಯರ ಪರ ಯೋಚಿಸುವ, ಮಾನವಜೀವಿಗಳಿಗೆ ಇಂಬಾಗಿ ನಿಲ್ಲುವ ಬುದ್ಧಿಜೀವಿ. ಈ ಕಾರಣಕ್ಕೇ ಸ್ಯೂಸ್‌ಗೆ ಪ್ರಮೀಥಿಯಸನನ್ನು ಕಂಡರೆ ಅಸಹನೆ. ‘ಮನುಷ್ಯರು ತಾನು ಹೇಳಿದ್ದು ಕೇಳಿಕೊಂಡಿರಬೇಕು, ತನಗೆ ತಗ್ಗಿ ಬಗ್ಗಿ ನಡೆಯಬೇಕು’ ಎಂಬುದು ಸ್ಯೂಸನ ಅಹಂಕಾರ. ಆದರೆ ಪ್ರಮೀಥಿಯಸ್ ಸ್ಯೂಸನ ಆಜ್ಞೆ ಮೀರಿ, ದೇವತೆಗಳ ಕಣ್ಣು ತಪ್ಪಿಸಿ, ಬೆಂಕಿಯನ್ನು ಬಳ್ಳಿಯ ಕಾಂಡದಲ್ಲಿಟ್ಟುಕೊಂಡು ತಂದು ಮಾನವರಿಗೆ ಸಹಾಯ ಮಾಡಿದ. ಬೆಂಕಿಯಿಂದ ಮಾನವಜೀವಿಗಳ ಏಳಿಗೆ ಶುರುವಾಯಿತು. ಎಂಥ ಕಷ್ಟ ಎದುರಿಸಿಯಾದರೂ ಮಾನವರಿಗೆ ನೆರವಾದ ಪ್ರಮೀಥಿಯಸನಿಂದ ಕಾರ್ಲ್ ಮಾರ್ಕ್ಸ್ ಪ್ರೇರಣೆ ಪಡೆದಿದ್ದರ ಬಗ್ಗೆ ಹಿಂದೊಮ್ಮೆ ಬರೆದಿರುವೆ. 

ಪ್ರಮೀಥಿಯಸನ ಮಾನವ ಪ್ರೇಮ ಕಂಡು ಸ್ಯೂಸ್ ಕೋಪ ನೆತ್ತಿಗೇರಿತು. ಪ್ರಮೀಥಿಯಸನ ಸೊಕ್ಕು ಮುರಿಯಬೇಕೆಂದು ದೇವಲೋಕದ ಶಿಲ್ಪಿ ಹೆಫಿಸ್ಟಸ್‌ನನ್ನು ಕರೆದು ಒಂದು ಸುಂದರವಾದ ಹೆಣ್ಣಿನ ಮೂರ್ತಿಯನ್ನು ಮಾಡಲು ಹೇಳಿದ. ಸೌಂದರ್ಯ ದೇವತೆ ಆಫ್ರೋದಿತಿ ಆ ಮೂರ್ತಿಗೆ ಅದ್ಭುತ ಸೌಂದರ್ಯ ಕೊಟ್ಟಳು. ಉಳಿದ ದೇವತೆಗಳು ವಂಚನೆ, ಕಪಟ, ಸುಳ್ಳು ಮುಂತಾದ ಅವಗುಣಗಳನ್ನು ಈ ಹೆಣ್ಣಿಗೆ ಕೊಟ್ಟರು. ಹೀಗೆ ಮೈದಾಳಿದ ಅವಳ ಹೆಸರು ಪಂಡೋರ. ಸ್ಯೂಸ್ ಅವಳಿಗೆ ಒಂದು ಅಪೂರ್ವ ಪೆಟ್ಟಿಗೆ ಕೊಟ್ಟ. ಅದರಲ್ಲಿ ಏನಿದೆ ಎಂಬುದು ರಹಸ್ಯವಾಗಿತ್ತು.  

ಆಮೇಲೆ ಸ್ಯೂಸ್ ಸುಂದರಿ ಪಂಡೋರಳನ್ನು ಪ್ರಮೀಥಿಯಸ್‌ನ ಸೋದರಮಾವ ಎಮಿಪಿಥಿಯಸ್‌ಗೆ ಕಾಣಿಕೆ ಕೊಟ್ಟ. ಎಪಿಮಿಥಿಯಸ್ ಈಕೆಯನ್ನು ಕಂಡು ಸಹಜವಾಗಿಯೇ ಮೋಹಗೊಂಡ. ಆದರೆ ಪ್ರಮೀಥಿಯಸ್ ಇದರಲ್ಲೇನೋ ಮೋಸವಿದೆ ಎಂದು ಅವನನ್ನು ಎಚ್ಚರಿಸಿ ಆಕೆಯನ್ನು ಹಿಂದಕ್ಕೆ ಕಳಿಸುವಂತೆ ನೋಡಿಕೊಂಡ. ಎಮಿಪಿಥಿಯಸ್ ಆಕೆಯನ್ನು ಸ್ಯೂಸ್ ದೇವನಿಗೆ ವಾಪಸ್ ಕಳಿಸಿಕೊಟ್ಟ.
ಸ್ಯೂಸನಿಗೆ ಕೋಪ ಬಂತು. ಪ್ರಮೀಥಿಯಸ್ ತನ್ನ ಮಗಳು ಅಥೀನಿಯನ್ನು ಕದ್ದೊಯ್ದಲು ಬಂದಿದ್ದ ಎಂಬ ಸುಳ್ಳು ಆಪಾದನೆ ಹೊರಿಸಿ ಅವನ್ನು ಬಂಧಿಸಿ ಸರಪಳಿಯಿಂದ ಕೋಡುಗಲ್ಲಿಗೆ ಕಟ್ಟಿ ಹಾಕಿಸಿದ. 

ಇದಾದ ಮೇಲೆ ಸ್ಯೂಸ್ ಪಂಡೋರಳನ್ನು ಮತ್ತೆ ಎಮಿಪಿಥಿಯಸ್‌ ಮನೆಗೆ ಕಳಿಸಿದ. ಆತ ಅವಳ ಬಗೆಗಿನ ಮೋಹ, ಸ್ಯೂಸ್ ಭಯ ಎರಡೂ ಸೇರಿ ಪಂಡೋರಳನ್ನು ಮದುವೆಯಾದ. ಒಂದು ದಿನ ಪಂಡೋರ ಕುತೂಹಲದಿಂದ ಆ ಅಪೂರ್ವ ಪೆಟ್ಟಿಗೆಯನ್ನು ತೆರೆದೇ ಬಿಟ್ಟಳು. ಪೆಟ್ಟಿಗೆಯೊಳಗಿಂದ ರೋಗ, ದ್ವೇಷ, ಮುಪ್ಪು, ಅಸೂಯೆ ಮುಂತಾದ ಎಲ್ಲ ಬಗೆಯ ಕೇಡುಗಳೂ ಹೊರಬಿದ್ದವು. ಆಗಿನಿಂದ ಲೋಕದ ಕಷ್ಟ ಕೋಟಲೆಗಳು ಶುರುವಾದವು. ಇದು  ಈ ಕತೆಯ ಸಾರ.

ಈ ಕತೆಯ ಮತ್ತೊಂದು ರೂಪದ ಪ್ರಕಾರ, ಈ ಪೆಟ್ಟಿಗೆ ಮೊದಲೇ ಎಮಿಪಿಥಿಯಸ್ ಮನೆಯಲ್ಲಿತ್ತು. ಈ ಪೆಟ್ಟಿಗೆಯನ್ನು ಪ್ರೊಮಿಥ್ಯೂಸ್ ತಂದಿಟ್ಟಿದ್ದ.  ಪ್ರಮೀಥಿಯಸ್ ಜಗತ್ತಿನಲ್ಲಿ ಮಾನವರಿಗೆ ಕಷ್ಟ ಕೊಡುವ ದುಷ್ಟ ಕೀಟಗಳನ್ನೆಲ್ಲ ಆ ಪೆಟ್ಟಿಗೆಯಲ್ಲಿ ಹಿಡಿದಿಟ್ಟು, ಮಾನವರನ್ನು ಕಷ್ಟಕೋಟಲೆಗಳಿಂದ ಪಾರು ಮಾಡಲೆತ್ನಿಸಿದ್ದ. ಈ ಪೆಟ್ಟಿಗೆಯನ್ನು ತೆರೆಯಬೇಡವೆಂದು ಹೇಳಿದ್ದರೂ ಪಂಡೋರ ಕುತೂಹಲ ತಡೆಯಲಾರದೆ ತೆರೆದೇಬಿಟ್ಟಳು. ತಕ್ಷಣ ಕಷ್ಟಕೀಟಗಳೆಲ್ಲ ಹೊರ ಬಂದು ಲೋಕದ ಮನುಷ್ಯರನ್ನು ಕಚ್ಚಿದವು. ಅಂದಿನಿಂದ ಮಾನವರ ಸಂಕಷ್ಟಗಳು ಶುರುವಾದವು. ಕೊನೆಗೆ ಒಂದು ಬಿಳಿ ಕೀಟ ಮಾತ್ರ ಪೆಟ್ಟಿಗೆಯಲ್ಲಿ ಹಾಗೇ ಉಳಿಯಿತು. ಅದು ಆಸೆ ನಂಬಿಕೆ ಭರವಸೆಗಳ ಕೀಟ. ಈ ಬಿಳಿ ಕೀಟ ಮನುಷ್ಯರಿಗೆ ಎಷ್ಟೇ ಕಷ್ಟ ಬಂದರೂ ಮುಂದೆ ಒಳ್ಳೆಯ ಕಾಲ ಬರುತ್ತದೆ ಎಂಬುದನ್ನು ಸೂಚಿಸುತ್ತದಂತೆ.  

ಮುಂದೆ ಈ ಪಂಡೋರ ಕತೆ ಲೋಕದ ಕಷ್ಟಗಳಿಗೆಲ್ಲ ಹೆಣ್ಣೇ ಮೂಲ ಕಾರಣ ಎಂದು ಮೂಗು ಮುರಿಯುವವರ ಕೈ ಬಾಯಿಗೆ ಸಿಕ್ಕು ಅಗ್ಗವಾಯಿತು. ಇವತ್ತಿಗೂ ಯಾರಾದರೂ ಒಂದರ ಮೇಲೊಂದರಂತೆ ಕಷ್ಟಕ್ಕೆ ಸಿಕ್ಕಿ ಹಾಕಿಕೊಂಡರೆ ‘ಪಂಡೋರಾ ಬಾಕ್ಸ್ ತೆರೆದಂತಾಯಿತು’ ಎಂಬ ರೂಪಕ ಜಗತ್ತಿನಲ್ಲಿ ಪರಿಚಿತವಿದೆ. ಆದರೆ ಪಂಡೋರಳನ್ನು ಸ್ವತಃ ಸ್ಯೂಸ್ ದೇವ ಹಾಗೂ ದೇವತೆಗಳು ಮೋಸದಿಂದ ಬಳಸಿಕೊಂಡರು ಎಂಬ ಕತೆ ಹಿನ್ನೆಲೆಗೆ ಸರಿದುಬಿಟ್ಟಿದೆ.  

ಈ ಕತೆಯನ್ನು ಸೃಷ್ಟಿಸಿದ ಗ್ರೀಕ್ ಸಂಸ್ಕೃತಿಯಲ್ಲೇ ಹೆಣ್ಣಿನ ಎಣೆಯಿಲ್ಲದ, ಕೊನೆಯಿಲ್ಲದ ದುಃಖವನ್ನು ಬಿಂಬಿಸುವ ನಿಯೋಬಿಯ ಕತೆಯೂ ಸೃಷ್ಟಿಯಾಗಿದೆ:

ನಿಯೋಬಿ ಥೀಬ್ಸ್ ರಾಜ್ಯದ ದೊರೆ ಆಂಫಿಯೋನ್‌ನ ಹೆಂಡತಿ. ಏಳು ಗಂಡು, ಏಳು ಹೆಣ್ಣು ಮಕ್ಕಳನ್ನು ಹಡೆದು ಅತಿ ಹೆಮ್ಮೆಯಿಂದ ಇದ್ದಳು. ‘ಸ್ಯೂಸ್ ದೇವನ ಪ್ರೇಯಸಿ ಲೀಟೋಗೆ ಇಬ್ಬರೇ ಮಕ್ಕಳು; ನನಗೆ ಹದಿನಾಲ್ಕು ಮಕ್ಕಳು’ ಎಂದು ಅವಳಿಗೆ ಹೆಮ್ಮೆ! ‘ಆ ಎರಡು ಮಕ್ಕಳ ಲೀಟೋಗೇಕೆ ಪೂಜೆ? ನನಗೆ ಪೂಜೆ ಸಲ್ಲಿಸಿ’ ಎಂದು ಕೂಡ ಹೇಳಿಬಿಟ್ಟಳು. ಈ ಬಗ್ಗೆ ಲೀಟೋ ತನ್ನ ಮಕ್ಕಳಾದ ಅಪೊಲೋ, ಆರ್ಟೆಮಿಸ್ ಜೊತೆಗೆ ದೂರಿ ಅಲವತ್ತುಕೊಂಡಳು.

ಸರಿ, ತಾಯಿಗೆ ಮರ್ಯಾದೆ ತಂದುಕೊಡಲು ಹೊರಟ ಈ ಮಕ್ಕಳು ನಿಯೋಬಿಯ ಏಳು ಗಂಡು ಮಕ್ಕಳನ್ನೂ ಒಂದೇ ದಿನ ಕೊಂದುಬಿಟ್ಟರು. ತನ್ನ ಏಳೂ ಗಂಡುಮಕ್ಕಳು ಒಟ್ಟಿಗೇ ಸತ್ತದ್ದನ್ನು ಕೇಳಿ ಅಪ್ಪ ದಿಗ್ಭ್ರಮೆಗೊಂಡ ಆಂಫಿಯೋನ್  ಕತ್ತಿಯಿಂದ ಇರಿದುಕೊಂಡು ಸತ್ತ. ನಿಯೋಬಿ ಕೊನೆಗೆ ತನ್ನ ಏಳು ಹೆಣ್ಣು ಮಕ್ಕಳೊಂದಿಗೆ ಪತಿ ಹಾಗೂ ಗಂಡುಮಕ್ಕಳ ಶವ ಸಂಸ್ಕಾರ ಮಾಡುತ್ತಿದ್ದಾಗ ಆರ್ಟಿಮಿಸ್ ಅವಳ ಏಳು ಹೆಣ್ಣುಮಕ್ಕಳನ್ನೂ ಬಾಣದಿಂದ ಕೊಂದ. 

ಈ ಕತೆಯ ಕೊನೆಯನ್ನು ಸೀತಾರಾಮಯ್ಯ ಹೀಗೆ ಬಣ್ಣಿಸುತ್ತಾರೆ: ‘ದುಃಖ ತಡೆಯಲಾರದೆ ನಿಯೋಬಿ ಶಿಲಾಮೂರ್ತಿಯಂತೆ ಮೌನವಾಗಿ, ಹೆಣಗಳ ರಾಶಿಯ ಮುಂದೆ ಮೂಕರೋದನ ಮಾಡುತ್ತ ನಿಂತಿದ್ದಳು…ಹೆಣಗಳ ಸಂಸ್ಕಾರವಾಗದಂತೆ ಸ್ಯೂಸ್ ತಡೆದ. ತನ್ನ ಬದುಕಿನಲ್ಲಿ ಉಂಟಾದ ಈ ಭೀಕರ ಶೂನ್ಯಕ್ಕೆ ಹೆದರಿ ನಿಯೋಬಿ ಸಿಫೈಲಸ್ ಬೆಟ್ಟಕ್ಕೆ ಓಡಿ ಹೋದಳು. ಸ್ಯೂಸ್ ಕೊನೆಗೆ ಅವಳನ್ನೊಂದು ಶಿಲಾಮೂರ್ತಿಯಾಗಿ ಮಾಡಿದ. ಶಿಲಾಮೂರ್ತಿಯಾದ ಮೇಲೂ ಅವಳ ಕಣ್ಣಿಂದ ಧಾರಾಕಾರವಾಗಿ ಕಂಬನಿ ಇಳಿದು ಅವಳ ಕೆನ್ನೆಗಳ ಮೇಲೆ ಹರಿಯುತ್ತಿತ್ತು ಎಂದು ಆ ದಾರಿಯಲ್ಲಿ ಹೋಗುತ್ತಿದ್ದ ಪ್ರಯಾಣಿಕರು ಹೇಳುತ್ತಿದ್ದರು.’ 

ಎಷ್ಟೋ ವರ್ಷಗಳ ಕೆಳಗೆ ಈ ನಿಯೋಬಿಯ ಕತೆ ಓದಿದಾಗಿನಿಂದಲೂ ನಿಯೋಬಿ ನನಗೆ ಎಂದೂ ಮುಗಿಯದ ದುಃಖವುಳ್ಳ ಈ ಲೋಕದ ಹೆಣ್ಣುಗಳ ಪ್ರತಿನಿಧಿಯಂತೆಯೇ ಕಂಡಿದ್ದಾಳೆ. ಹೆಣ್ಣಿನ ದುಃಖಕ್ಕೆ ಕೊನೆಯೆಂಬುದೇ ಇಲ್ಲ ಎಂಬುದನ್ನೇ ಈ ಕತೆ ನನಗೆ ಮತ್ತೆ ಮತ್ತೆ ಹೇಳುತ್ತಿರುತ್ತದೆ. ನಾನು ಕಾಣುವ ಸ್ತ್ರೀಯರ ಬದುಕೂ ಇದನ್ನೇ ಮನವರಿಕೆ ಮಾಡಿಕೊಡುತ್ತಿರುತ್ತದೆ.   

ಮಿಥ್‌ಗಳು ಅಥವಾ ಪುರಾಣಗಳು ಸಮುದಾಯದ ಅಪ್ರಜ್ಞೆಯಿಂದ ಸೃಷ್ಟಿಯಾಗುತ್ತವೆ ಎಂಬ ಮನೋವಿಜ್ಞಾನಿ ಕಾರ್ಲ್ ಯೂಂಗ್ ಮಾತನ್ನು ನೀವು ಕೇಳಿರಬಹುದು. ಮಾನವರಲ್ಲಿ ಪ್ರಜ್ಞೆಯ ಸ್ತರ ಹಾಗೂ ಅಪ್ರಜ್ಞೆಯ ಸ್ತರ ಎರಡೂ ಇರುತ್ತವೆ; ಕನಸುಗಳು ಅಪ್ರಜ್ಞೆಯ ಸ್ತರದಿಂದ ಹುಟ್ಟುತ್ತವೆ ಎಂದು ಸಿಗ್ಮಂಡ್ ಫ್ರಾಯ್ಡ್ ತೋರಿಸಿದ. ಫ್ರಾಯ್ಡ್‌ನ ಶಿಷ್ಯ ಹಾಗೂ ಫ್ರಾಯ್ಡನಿಂದ ಕವಲಾಗಿ ಮತ್ತೊಂದು ದಿಕ್ಕಿನಲ್ಲಿ ಸ್ವತಂತ್ರವಾಗಿ ಬೆಳೆದ ಮನೋವಿಜ್ಞಾನಿ ಯೂಂಗ್ ಪ್ರಕಾರ ಸಂಸ್ಕೃತಿಗಳಿಗೂ, ಸಮುದಾಯಗಳಿಗೂ ಅಪ್ರಜ್ಞೆ ಇರುತ್ತದೆ. 

ಯೂಂಗ್ ಗ್ರಹಿಕೆಯ ಜಾಡು ಹಿಡಿದು ನೋಡಿದರೆ, ನಿಯೋಬಿ, ಪಂಡೋರ ಅಥವಾ ಭಾರತದ ಯಯಾತಿ, ಸತಿ ಸಾವಿತ್ರಿ ಥರದ ಪುರಾಣಗಳು, ದಂತಕತೆಗಳು ಹುಟ್ಟುವುದು ಸಮುದಾಯದ ಅಪ್ರಜ್ಞೆಯಿಂದ.  ಅಂದರೆ, ಹೆಣ್ಣನ್ನು ಕುರಿತ ಈ ಎರಡೂ ಕತೆಗಳು ಗ್ರೀಕ್ ಜನಮಾನಸದ ಅಪ್ರಜ್ಞೆಯ ಸ್ತರದಿಂದ ಹುಟ್ಟಿವೆ. ಗ್ರೀಕ್ ಸಮುದಾಯದ ಅಪ್ರಜ್ಞೆ ಇಂಥ ನೂರಾರು ಮಿಥ್ ಅಥವಾ ಪುರಾಣಕತೆಗಳನ್ನು ಸೃಷ್ಟಿಸಿದೆ. ಈ ಕತೆಗಳಲ್ಲಿ ಪುರುಷ ಪೂರ್ವಗ್ರಹಗಳೂ ದಂಡಿಯಾಗಿವೆ. 

ಆದರೂ ಯಾವುದೇ ಒಳ್ಳೆಯ ಕತೆಯ ಹಾಗೆ ಮಿಥ್ ಕೂಡ ಎಲ್ಲೋ ಮತ್ತೊಂದು ಸ್ತರದ ಸತ್ಯವನ್ನು ಉಸುರುತ್ತಲೇ ಇರುತ್ತದೆ. ಕೊನೆಗೆ ಶಿಲೆಯಾದರೂ ಕಣ್ಣೀರು ಸುರಿಸುವ ನಿಯೋಬಿಯ ಕತೆ ಲೋಕದ ಸ್ತ್ರೀ ಸಂಕುಲದ ದುಃಖವನ್ನು ಪ್ರತಿನಿಧಿಸುವುದು ಹೀಗೆ. ಆದರೆ ಪಂಡೋರ ಪೆಟ್ಟಿಗೆಯ ಕತೆ ಸ್ತ್ರೀ ಸಂಕುಲದ ಬಗ್ಗೆ ಪುರುಷ ಸಮುದಾಯದ ಪ್ರಜ್ಞೆ-ಅಪ್ರಜ್ಞೆ ಎರಡೂ ಸ್ತರಗಳಲ್ಲಿರುವ ನಿರಂತರ ಅನುಮಾನವನ್ನೇ ಸೂಚಿಸುವಂತಿದೆ ಎನ್ನಿಸುತ್ತದೆ.


 
 

Share on:

Comments

8 Comments



| ಡಾ. ರೇಣುಕಾ ಪ್ರಸಾದ್‌ ವಿ. ಟಿ.

ಪ್ಯಾಂಡೋರಳ ಪೆಟ್ಟಿಗೆ (ವಾಸ್ತವವಾಗಿ ಅದು ಹೂಜಿ) ಹೋಮರ್‌ ನ ʼಇಲಿಯಡ್‌ʼ ಮಹಾಕಾವ್ಯದಲ್ಲಿ ಬರುತ್ತದೆ. ನಯೋಬಿಯ ಕಥೆ ಹೇಸಿಯೋಡ್‌ ನ ʼವರ್ಕ್‌ ಅಂಡ್‌ ಡೇಸ್‌ʼ ನಲ್ಲಿ ಬರುತ್ತದೆ. ಇಬ್ಬರೂ ಕ್ರಿ.ಪೂ. ಏಳರ ಆಸುಪಾಸಿನವರು ಎಂದು ಊಹೆ. ಹೋಮರ್‌ ನ ಐಡೆಂಟಿಟಿ ಬಗ್ಗೆ ಗೊಂದಲವಿದೆ. ಹೇಸಿಯೋಡ್‌ ನಯೋಬಿಗೆ ಏಕೆ ಅಷ್ಟೊಂದು ಸಂಕಟವನ್ನಿಟ್ಟ? ಅವನು ಸ್ವಲ್ಪ ವಿಕೃತ ಮನಸ್ಸಿನವನಿರಬಹುದು. ಜೊತೆಗೆ ಮತ್ತೆರಡು ಕಾರಣಗಳಿವೆ. ಒಂದು, ಆ ಕಾಲದಲ್ಲಿ ಜೀವನದ ಬಗ್ಗೆ ನಿರಾಶಾವಾದ ಹಾಗೂ ಸ್ತ್ರೀ ವಿರೋಧಿತನವಿತ್ತು. ಎರಡನೆಯದು, ಹೇಸಿಯೋಡ್ ತನ್ನ ಸೋದರನೊಡನೆ ಆಸ್ತಿ ಸಂಘರ್ಷಕ್ಕೊಳಗಾಗಿ ಲಂಚ ತಿಂದ ಪಂಚಾಯ್ತುದಾರರಿಂದ ಮೋಸಕ್ಕೊಳಗಾಗಿದ್ದ (ಆ ಕಾಲದಲ್ಲೇ ನ್ಯಾಯ ವ್ಯವಸ್ಥೆಯನ್ನು ಲಂಚ ಆವರಿಸಿತ್ತು). ಯುಗದೃಷ್ಟಿಯ ಜೊತೆಗೆ ಸ್ವಂತದ ಕಡುಕಿನ ಕಾಣ್ಕೆಯೇ ವಾಸ್ತವವೆಂದು ನಂಬಿದ್ದ. ನಯೋಬಿಯ ಕಣ್ಣೀರು ನಮ್ಮನ್ನು ಸೆಳೆದರೆ ಕವಿಗೆ ಅವಳ ಅಹಂಕಾರ ದೊಡ್ಡದಾಗಿದೆ. ಅವಳನ್ನು ಶಿಕ್ಷಿಸುವುದು ʼಅನಿವಾರ್ಯʼ. ಸಣ್ಣ ತಪ್ಪಿಗೆ ಕೊಲ್ಲುವ ಕಾನೂನು ಕೆಲವೆಡೆ ಈಗಲೂ ಇರುವಾಗ ಅಂದಿನ ಕಾಲಮಾನವನ್ನು ಕಲ್ಪಿಸಿಕೊಳ್ಳಬಹುದು. ಷೇಕ್ಸ್‌ ಪಿಯರ್‌ ʼಹ್ಯಾಮ್ಲೆಟ್‌ʼ ನಲ್ಲಿ ರಾಣಿ ಗರ್ಟ್ರೂಡ್‌ ಳ ಬಗ್ಗೆ ಹೇಳುವಾಗ ʼಲೈಕ್‌ ನಯೋಬಿ, ಆಲ್‌ ಟಿಯರ್ಸ್‌ʼ ಅನ್ನುತ್ತಾನೆ, ನೆಗೆಟಿವ್‌ ಅರ್ಥದಲ್ಲಿ. ಪ್ಯಾಂಡೊರಾ ಹಾಗೂ ನಯೋಬಿ ಪ್ರಕರಣಗಳೆರಡರಲ್ಲೂ ಕಾಣುವುದು ದೈವದ ಪರವಾದ ಶಿಕ್ಷೆ. ಸೀತೆಯಲ್ಲಿ ಓದುಗರು ನಯೋಬಿಯ ಕಣ್ಣೀರನ್ನು ಕಾಣುತ್ತಾರೆ. ಸ್ವತಃ ರಾಮ ಪುರುಷ ಪೂರ್ವಗ್ರಹದ ಪ್ರತಿನಿಧಿಯಾಗಿ ಅವಳಲ್ಲಿ ಅನುಮಾನವನ್ನು ಕಾಣುತ್ತಾನೆ!


| Vasantha

ಎರಡನೇ ಕಥೆ ವಾಸ್ತವವಾದರೂ ಎಲ್ಲೋ ಬೆಳಕು ಸಿಗಬಹುದೆನ್ನುವ ಆಶಾಭಾವನೆಯಿಂದಲೇ ಹೆಣ್ಣು ಮಕ್ಕಳು ಜೀವನ ಪೂರ ಬಿಳಿ ಕೀಟಕ್ಕಾಗಿ ಕಾಯುತ್ತಿರುತ್ತಾರೆ


| Kusuma

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ ಎಂಬ ಡಿವಿಜಿಯವರ ಸಾಲುಗಳಲ್ಲಿಯ ಕಲ್ಲು ವಾಚ್ಯಗೊಂಡ ಪರಿ ನಿಯೋಬಿ. ಭಾರತೀಯ ಪುರಾಣಗಳಲ್ಲಿ ಅಹಲ್ಯೆ ಈ ರೀತಿಯಲ್ಲಿ ಕಲ್ಲಾದವಳು. ಪುರಾಣಗಳು ಕಟ್ಟಿಕೊಡುವ ರೂಪಕಗಳು ಬೆರಗು ಮೂಡಿಸುತ್ತವೆ. ವೇಷ, ಭಾಷೆ ಬದಲಾದರು ಈ ಆರ್ಷ ಪ್ರತೀಕಗಳು ಒಂದೇಯಾಗಿವೆ. ಕಲ್ಲಾಗು, ಮಳೆಯಾಗು(ಉತ್ತರ ಮಳೆ) ಮುಂತಾದ ರೂಪಕಗಳ ಹುಟ್ಟು ಮತ್ತು ಬಳಕೆ ಸೋಜಿಗ ಮೂಡಿಸುತ್ತದೆ.


| Dr.Kavyashri

Linking Niobe’s weeping stone to the universal sorrow of motherhood is a profound observation. It transforms a Greek legend into a timeless symbol of maternal grief that resonates across cultures. Your interpretation of Pandora’s box is equally sharp—it highlights how myths have historically been used to frame suspicion and anxiety around women. Thank you for this beautiful and thought-provoking write-up.


| Rupa

🌺🙏


| Hemavathi V

ಡಾ. ರೇಣುಕಾ ಪ್ರಸಾದ್ ಅವರು ಸೂಚಿಸಿರುವಂತೆ ವಾಲ್ಮೀಕಿಯ ಸೀತೆ ದುರ್ಬಲಳಲ್ಲ. ದುಃಖದ ಮಡುವಲ್ಲ. ಸೀತೆಯು ಪವಿತ್ರಳೆಂದೆ ರಾಮ ಘೋಷಿಸುತ್ತಾನೆ. ಆದರೂ ಆ ನೆಲೆಯಲ್ಲೂ ಗ್ರಹಿಸಬೇಕು ಏಕೆಂದರೆ ಜನರ ಪಠ್ಯದಲ್ಲಿ ಹಾಗೆ ಇದೆ. ಭಾಷೆಯಲ್ಲಿ ಮೂಲಕ್ಕೂ ಮನ್ನಣೆ ಕೊಡುವಂತೆ ಸ್ಥಳೀಯರ ಬಳಕೆಗೂ ಮನ್ನಣೆ ಕೊಡಲಾಗುತ್ತದೆ. ಹಾಗಾಗಿ 'ಕೋಟ್ಯಂತರ' 'ಕೋಟ್ಯಾಂತರ' ಎರಡು ಸರಿ. ಇದರಂತೆ ಜನರ ರಾಮಾಯಣ ಪಠ್ಯವೂ ಒಪ್ಪತಕ್ಕದ್ದು- ಮೂಲದ ಎಚ್ಚರದೊಂದಿಗೆ. ಭಾಷೆಯ ವಿಚಾರದಲ್ಲಿ ಈಗ ಸ್ಥಳೀಯರಲ್ಲದವರ ವ್ಯಾಪಕ ಬಳಕೆಯನ್ನು ಮಾನ್ಯ ಮಾಡಲಾಗುತ್ತಿದೆ. ಚಡ್ಡಿ, ಡಬ್ಬ, ಆಧಾರ್...ಇವೆಲ್ಲ ಈಗ ಇಂಗ್ಲಿಷ್‌ ಪದಗಳು ಕೂಡ.


| ಗುರು ಜಗಳೂರು

ಸರ್, ಈ ಎಲ್ಲ ಲೇಖನಗಳು ನಮಗೆ ಜ್ಞಾನ, ಸಂತೋಷವನ್ನು ಕೊಡುತ್ತವೆ ಮತ್ತು ಹೊಸ,ಹೊಸ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತದೆ. ಭಾನುವಾರದ ನಿಮ್ಮ ಮಾತುಗಳು ಸಹ ಬಹಳ ಚೆನ್ನಾಗಿತ್ತು ( ಲಂಕೇಶರ ಕಾರ್ಯಕ್ರಮ).ಯೂಟ್ಯೂಬ್ ಕೃಪೆಯಿಂದ ಇಂಥ ಕಾರ್ಯಕ್ರಮಗಳನ್ನು ನಾವು ಬಿಡುವಾದಾಗ ನೋಡಬಹುದು.ಹಿಂದೆಲ್ಲ ಇಷ್ಟು ಅನುಕೂಲ ಇರಲಿಲ್ಲ ಅಲ್ಲವೇ?


| ಡಾ. ನಿರಂಜನ ಮೂರ್ತಿ ಬಿ ಎಂ

ಗ್ರೀಕ್ ಪುರಾಣದ ಪಂಡೋರ ಮತ್ತು ನಿಯೋಬಿಯವರ ಕತೆಗಳ ವಿಶ್ಲೇಷಣೆ ಚೆನ್ನಾಗಿದೆ. ವ್ಯಥೆಯ ವಿಚಾರವೆಂದರೆ ಈ ಜಗದ ಬದುಕಿನ ಎಲ್ಲಾ ಕಷ್ಟ-ಕೋಟಲೆಗಳಿಗೆ ಮತ್ತು ದುಃಖ-ದುಮ್ಮಾನಗಳಿಗೆ ಹೆಣ್ಣೇ ಕಾರಣ ಎಂಬ ನಂಬಿಕೆ. ಆದರೆ ಎಲ್ಲಾ ಸುಖ-ಸಂತೋಷಗಳಿಗೆ, ಸಂಭ್ರಮ-ಸಡಗರಗಳಿಗೆ, ಸಮಾಧಾನ-ಸಂತೃಪ್ತಿಗಳಿಗೆ ಹೆಣ್ಣೇ ಕಾರಣ ಎಂಬ ಸತ್ಯವನ್ನು ಯಾರೂ ಅಂದರೆ ಪುರುಷರಾರೂ ಒಪ್ಪದಿರುವುದು ಆಶ್ಚರ್ಯ ಮತ್ತು ಆಘಾತಕಾರಿ. ಅಲ್ಲದೆ ಹೆಣ್ಣಿನ ಕಣ್ಣೀರಿಗೆ ಪುರುಷನ ಪೂರ್ವಾಗ್ರಹಪೀಡಿತ ಭಾವನೆಗಳೇ ಕಾರಣವಾಗಿದ್ದರೂ ಕೂಡ!




Add Comment


Mundana Kathana Nataka

YouTube






Recent Posts

Latest Blogs