ಟೀಕೆ ಟಿಪ್ಪಣಿಗಳ ಹೊಸ ಮುದ್ರಣ...

 ನಾವೆಷ್ಟು ನಿಧಾನಜೀವಿಗಳೆಂದರೆ, ನಾವೆಲ್ಲ ಲಂಕೇಶರು ಚಿರಂಜೀವಿ ಎಂದುಕೊಂಡಿದ್ದೆವು. ೧೯೯೭ರ ಸುಮಾರಿಗೆ ಲಂಕೇಶರು ಸಂಜೆಯ ಮಾತಿನ ನಡುವೆ ಅವರ ಟೀಕೆ ಟಿಪ್ಪಣಿಗಳನ್ನು ಆಯ್ದು ಎರಡು ಮೂರು ಸಂಪುಟಗಳಲ್ಲಿ ಜೋಡಿಸಲು ನನಗೆ ಹೇಳಿದ ನಂತರ, ಮೊದಲ ಎರಡು ಸಂಪುಟಗಳು ೧೯೯೮, ೧೯೯೯ರಲ್ಲಿ ಸಿದ್ಧವಾದವು. 

೧೯೯೯ರ ಕೊನೆಗೆ ಟೀಕೆ ಟಿಪ್ಪಣಿಯ ಮೂರನೆಯ ಸಂಪುಟದ ಬರಹಗಳನ್ನು ಎಂದಿನಂತೆ ಬಸವರಾಜ್, ಸತೀಶ್, ಈ. ಚಂದ್ರ ತಾಳಿಕಟ್ಟೆ ಮುಂತಾದ ‘ಲಂಕೇಶ್ ಪತ್ರಿಕೆ’ಯ ಕಟ್ಟಾಳುಗಳು ಸಜ್ಜುಗೊಳಿಸಿದ್ದರು. ಪುಸ್ತಕ ಮುದ್ರಣಕ್ಕೆ ಸಿದ್ಧವಾಗಿ ನನ್ನ ಪ್ರಸ್ತಾವನೆಯ ಟಿಪ್ಪಣಿಯೂ ತಯಾರಾಗತೊಡಗಿತ್ತು. ಟೀಕೆ ಟಿಪ್ಪಣಿಯ ಮೂರನೇ ಸಂಪುಟ ಈ ಘಟ್ಟದಲ್ಲಿದ್ದಾಗ ಲಂಕೇಶರು ೨೪ ಜನವರಿ ೨೦೦೦ದ ರಾತ್ರಿ ನಿರ್ಗಮಿಸಿದರು. ಮೂರನೇ ಸಂಪುಟ ಅವರಿದ್ದಾಗಲೇ ಬರದೇ ಹೋದುದಕ್ಕೆ, ಮಾತಿಗೆ ತಪ್ಪಿದ್ದಕ್ಕೆ, ಪೆಚ್ಚೆನ್ನಿಸುತ್ತಲೇ ಇರುತ್ತದೆ. ಅವತ್ತು ಕಂದು ಹಾಳೆಗಳಲ್ಲಿ ಬರೆದ ಮೂರನೆಯ ಮುದ್ರಣದ ಪ್ರಸ್ತಾವನೆ ಕೂಡ ಎಲ್ಲೋ ಹಳೆಯ ಕಡತಗಳಲ್ಲಿದೆ. 

ಕೆಲವು ತಿಂಗಳ ಕೆಳಗೆ ಕವಿತಾ ಲಂಕೇಶ್, ಗೆಳೆಯ ಸತೀಶ್ ‘ಟೀಕೆ ಟಿಪ್ಪಣಿ’ಯ ಮೂರೂ ಸಂಪುಟಗಳನ್ನು ಮತ್ತೆ ಮುದ್ರಿಸುವ ಮಾತಾಡಿದ ಮೇಲೆ ಮತ್ತೆ ಲಂಕೇಶರ ಬರಹಗಳಿಗೆ ಮರಳಿದೆ; ’ಮರಳಿದೆ’ ಎಂಬ ಮಾತೇ ಅಸಂಗತ; ೧೯೮೦ರಲ್ಲಿ ಈ ಟೀಕೆ ಟಿಪ್ಪಣಿಗಳು ಪ್ರಕಟವಾಗಲು ಶುರು ಮಾಡಿದ ಕಾಲದಿಂದಲೂ ಅವುಗಳ ಜೊತೆಗೇ ಇರುವೆ!

ಮೊದಲ ಎರಡು ಸಂಪುಟಗಳ ತಯಾರಿಯಲ್ಲಿ ‘ಇದನ್ನು ಹಾಕು’, ‘ಇದನ್ನು ಹಾಕಬೇಡ’ ಎಂದು ಯಾವತ್ತೂ ಹೇಳದಿದ್ದ; ‘ಇದು ಬೇಡ, ಬಿಡೋಣ ಸಾರ್‍’ ಎಂದರೆ, ‘ಓಕೇ ಓಕೇ’ ಎನ್ನುತ್ತಿದ್ದ ಲಂಕೇಶರು ಮೂರನೆಯ ಸಂಪುಟದ ಆಯ್ಕೆಗಳನ್ನೂ ಒಪ್ಪುತ್ತಿದ್ದರು ಎಂಬುದು ನನ್ನ ನಂಬಿಕೆ. ಆದರೂ, ಟೀಕೆಟಿಪ್ಪಣಿಗಳ ಮೊದಲ ಎರಡು ಸಂಪುಟಗಳ ಮುದ್ರಣಕ್ಕೆ ಮುನ್ನ ಅವರು ಕೆಲವೇ ಗಳಿಗೆಗಳಲ್ಲಿ ಬರೆದಿದ್ದ ಆ ಕ್ಷಣದ ಆರಂಭದ ಮಾತುಗಳಿಲ್ಲದ ಮೂರನೆಯ ಸಂಪುಟದ ಮೊದಲ ಪುಟಗಳನ್ನು ಇವತ್ತು ನೋಡುತ್ತಿದ್ದರೆ ವಿಚಿತ್ರ ಖಾಲಿ ಅನುಭವ… 

ಇದೀಗ ಎರಡು ಸಂಪುಟಗಳ ಮುದ್ರಣ ಮುಗಿದಂತೆ ಮೂರನೆಯ ಸಂಪುಟದ ಬರಹಗಳನ್ನು ಕೂಡ ಗೆಳೆಯ ಕಿಶೋರ್‍ ವಿನ್ಯಾಸ ಮಾಡಿ ಒಗ್ಗೂಡಿಸಿಕೊಟ್ಟರು. ಹೊಸ ತಲೆಮಾರಿನ ಲೇಖಕ ಮೋಹನ್ ಮಿರ್ಲೆ, ಲೇಖಕಿ ಕಾವ್ಯಶ್ರೀ ಈ ಸಂಪುಟಗಳ ಬರಹಗಳನ್ನು ಓದಿ ಬಹುತೇಕ ತಪ್ಪುಗಳನ್ನು ಸರಿಪಡಿಸಿದ್ದರು. ಮೂರನೆಯ ಸಂಪುಟವನ್ನು ಅಚ್ಚಿಗೆ ಕಳಿಸುವಾಗ ಲಂಕೇಶರ ಕೊನೆಯ ಸಂಚಿಕೆಯ ಬರಹ ನೆನಪಾಯಿತು. ಆದರೆ ಕಳೆದ ಇಪ್ಪತ್ತೈದು ವರ್ಷಗಳಿಂದ ಜೋಪಾನವಾಗಿಟ್ಟುಕೊಂಡಿದ್ದ ಸಂಚಿಕೆಯಲ್ಲಿ ಆ ಬರಹವೇ ಮಿಸ್ಸಾಗಿತ್ತು! ಗೆಳೆಯ ಈ. ಚಂದ್ರ ಕಳಿಸಿದ ‘ಈ ಸಂಚಿಕೆ’ಯ ಅಂಕಣದಲ್ಲಿ ಬರುವ ಸಾಲು: ‘ಇದನ್ನೆಲ್ಲ ನಾನು ಒಂದು ರೀತಿಯ ಪ್ರಜ್ಞಾಪ್ರವಾಹ ರೂಪದಲ್ಲಿ ಹೇಳುತ್ತಿದ್ದೇನೆ...’ 

ಇದು ಲಂಕೇಶರು ೨೦೦೦ನೇ ಇಸವಿಯ ೨೪ನೇ ತಾರೀಕು ತಮ್ಮ ಕೊನೆಯ ಸಂಜೆ, ೬-೭ ಗಂಟೆಯ ನಡುವೆ ಬರೆದ ಮಾತು. ಇದು ಒಂದರ್ಥದಲ್ಲಿ ಅವರ ಇಡೀ ಜೀವಮಾನದ ಬರವಣಿಗೆಯ ರೀತಿಯನ್ನೇ ಸೂಚಿಸಿದಂತಿದೆ.  ಹತ್ತಿರ ಹತ್ತಿರ ಇಪ್ಪತ್ತು ವರ್ಷ ಕಾಲ ತಮ್ಮ ಪತ್ರಿಕೆಯಲ್ಲಿ ಹಲ ಬಗೆಯ ಅಂಕಣಗಳನ್ನು ಬರೆದ ಲಂಕೇಶರ ಗದ್ಯದಲ್ಲಿ ಈ ಪ್ರಜ್ಞಾಪ್ರವಾಹದ ಅಂಶ ಸದಾ ಇತ್ತು. ಟೀಕೆ ಟಿಪ್ಪಣಿಯ ಎರಡನೇ ಸಂಪುಟ ಪ್ರಕಟವಾಗುವ ಹೊತ್ತಿಗೆ ಅವರು ‘ಈ ಸಂಚಿಕೆ’ಯಲ್ಲಿ ಪತ್ರಿಕೆ ಅಚ್ಚಿಗೆ ಹೋಗುವ ಮುನ್ನ ಆ ಕ್ಷಣದ ಅನ್ನಿಸಿಕೆಗಳನ್ನು ಬರೆಯತೊಡಗಿದ್ದರು. ಅಲ್ಲಂತೂ ಈ ಪ್ರಜ್ಞಾಪ್ರವಾಹ ತುಸು ಹೆಚ್ಚೇ ಹರಿಯತೊಡಗಿತ್ತು.  

ಬರೆಯುವ ಮನುಷ್ಯನೊಬ್ಬನ ವ್ಯಕ್ತಿತ್ವ-ಸಂವೇದನೆ ಅವನು ಬಳಸುವ ಎಲ್ಲ ಪ್ರಕಾರಗಳಲ್ಲೂ ಹೆಚ್ಚು ಕಡಿಮೆ ಥರದಲ್ಲಿ ಒಂದೇ ರೀತಿಯಲ್ಲಿ ಹರಿಯತೊಡಗುತ್ತದೆ ಎಂಬುದು ನನ್ನ ನಂಬಿಕೆ. ಲಂಕೇಶರ ಕೊನೆಯ ಕತೆಗಳಾದ ‘ರೆಡ್ ಏಂಜೆಲ್’ ಮುಂತಾದ ಕತೆಗಳ ಈ ಮುಕ್ತ ಹರಿವಿನ ಗುಣ ಅವರ ನೀಲು ಪದ್ಯಗಳಲ್ಲಿ, ‘ಟೀಕೆ ಟಿಪ್ಪಣಿ’ಗಳಲ್ಲಿ ‘ಈ ಸಂಚಿಕೆ’ಯಲ್ಲಿ; ‘ಇಂಥವರು’  ವ್ಯಕ್ತಿಚಿತ್ರಗಳಲ್ಲಿ, ಸಂಜೆಯ ಮಾತುಕತೆಗಳಲ್ಲಿ ಹೆಚ್ಚು ಕಡಿಮೆ ಒಂದೇ ಥರ ಇರುತ್ತಿತ್ತು. ಈ ಮಾತನ್ನು ೧೯೮೦ರಿಂದ ೨೦೦೦ನೇ ಇಸವಿಯ ಮೊದಲ ತಿಂಗಳವರೆಗೂ ಲಂಕೇಶರು ಬರೆದ ಹತ್ತಿರ ಹತ್ತಿರ ೯೫೦ ಟೀಕೆ ಟಿಪ್ಪಣಿಗಳನ್ನು ಕಾಲಕಾಲಕ್ಕೆ ಓದಿರುವ ಆಧಾರದ ಮೇಲೆ ಹೇಳುತ್ತಿದ್ದೇನೆ. 

ಲಂಕೇಶರ ನಿರ್ಗಮನದ ನಂತರದ ಇಪ್ಪತ್ತಾರು ವರ್ಷಗಳ ನಂತರವೂ ಈ ಟೀಕೆ ಟಿಪ್ಪಣಿಗಳು ಹೊಸ ಹೊಸ ತಲೆಮಾರುಗಳ ಸಂಗಾತಿಯಾಗಿ ಮುಂದುವರಿದಿವೆ. ಲಂಕೇಶರು ನಿರ್ಗಮಿಸಿದ ವಾರ ‘ಅಭಿನವ ಬೋದಿಲೇರ್’, ಕವಿ ವಿ. ಎಂ. ಮಂಜುನಾಥ್ ‘ಕ್ರೈಸ್ಟ್’ ಎಂಬ ಹೆಸರಿನಲ್ಲಿ ಬರೆದ ಈ ‘ಸಂತನೂ’ ಎಂಬ ನೀಲು ಮಾದರಿಯ ಆಕ್ಷಣದ ಸ್ಪಂದನ ಮೊನ್ನೆ ಮತ್ತೆ ಸಿಕ್ಕಿತು. ಈ ಪದ್ಯ ಲಂಕೇಶರಿಂದ ಹಲವು ಕನ್ನಡ ತಲೆಮಾರುಗಳು ಕಲಿತದ್ದನ್ನು, ಮುಂದಿನ ತಲೆಮಾರು ಅವರನ್ನು ಓದಲಿರುವ ರೀತಿಯನ್ನು ಸೂಚಿಸುವಂತಿತ್ತು:  

ಬಸವಣ್ಣ ಅಲ್ಲಮ ಅಕ್ಕಮಹಾದೇವಿ
ಗಾಂಧಿ ಎಲಿಯಟ್ 
ಬರ್ಗಮನ್ ಬೋದಿಲೇರ್ 
ಪುಷ್ಕಿನ್ ಶೇಕ್‌ಸ್ಪಿಯರ್ 
ಅವರೊಡನೆ ಸಂಧಿಸಿ
ತಬ್ಬಿಬ್ಬಾಗಿಸುವ ಚಾಲಾಕು 
ಆ ಧಿಮಾಕಿನ ಜೀವದ್ದು. 

ಲಂಕೇಶರ ಟೀಕೆ ಟಿಪ್ಪಣಿಗಳನ್ನು ೨೦೨೫-೨೬ರಲ್ಲಿ ಮತ್ತೆ ಇಡಿಯಾಗಿ ಓದುವಾಗಲೂ ಅವು ಎಂದಿನಂತೆಯೇ ಆತ್ಮೀಯವಾಗಿ ಕಾಣತೊಡಗಿದವು. ಬರಹಗಳ ಬನಿ ಹಿಂಗಿಲ್ಲ; ಜೀವಂತಿಕೆ ಮುಕ್ಕಾಗಿಲ್ಲ. ಸಮಕಾಲೀನ ಅರ್ಥ ಹೊರಡುತ್ತಲೇ ಇದೆ. ಈ ಸಂಪುಟದಲ್ಲಿರುವ ಹಲವು ಬರಹಗಳನ್ನು ಬರೆಯುವ ಕಾಲಕ್ಕೆ ಲಂಕೇಶ್ ಮಿದುಳಿನ ಸ್ಟ್ರೋಕಿನಿಂದ ಚೇತರಿಸಿಕೊಳ್ಳುತ್ತಿದ್ದರು; ದೇಹ ಶಿಥಿಲವಾಗತೊಡಗಿತ್ತು. ಒಂದು ಕಣ್ಣು ಮುಚ್ಚಿಕೊಂಡಿತ್ತು. ಮತ್ತೊಂದು ಕಣ್ಣು ಯಾವಾಗ ಮುಚ್ಚಿಕೊಳ್ಳುತ್ತದೋ ಎಂಬ ಆತಂಕವಿತ್ತು. ದೇಹದ ಶಿಥಿಲತೆ ಹಾಗೂ ಸಾವಿನ ಆತಂಕವನ್ನು ಮುಖಾಮುಖಿಯಾಗುವ ಏಕಮಾತ್ರ ಸಾಧನವೆಂಬಂತೆ ಅವರು ತೊಡಗಿದ ಬರವಣಿಗೆ ಅವರಿಗೆ ತೀವ್ರ ಸ್ವ-ಪರೀಕ್ಷೆಯ ಸಾಧನವಾಯಿತು. 

ಲಂಕೇಶರ ‘ಫಿಲಾಸಫಿ’ ಎನ್ನುವುದು ‘ಅನುದಿನದ ಫಿಲಾಸಫಿ’ ಎಂದು ಈಚೆಗೆ ಅವರ ಹೊಸ ಮುದ್ರಣಗಳಿಗೆ ಮುನ್ನುಡಿ ಬರೆಯುವಾಗ ಮತ್ತೆ ಮತ್ತೆ ಅನ್ನಿಸುತ್ತಿತ್ತು. ಅವರ ಕೊನೆಯ ವರ್ಷಗಳ ಬರಹಗಳ ಈ ಅನುದಿನದ ಫಿಲಾಸಫಿಗೆ ಕಾಯಿಲೆ, ದೇಹ, ಮನಸ್ಸು, ಆರೋಗ್ಯದ ಅನುದಿನದ ಸವಾಲುಗಳು ಹೆಚ್ಚು ಹೆಚ್ಚು ಸೇರಿಕೊಂಡವು; ಎಂಥ ಸ್ಥಿತಿಯಲ್ಲೂ ಬದುಕುವ ದಾಹ, ಬದುಕುವ ಕಲೆ, ಹಲ್ಲು ಕಚ್ಚಿ ಬದುಕಿದವರ, ಬದುಕಬಯಸುವವರ ಅನುಭವಗಳು ಸೇರಿಕೊಳ್ಳತೊಡಗಿದವು. ಈ ಬರಹಗಳು ಖಾಸಗಿ ಎಂದರೆ ಖಾಸಗಿ; ಸಾರ್ವಜನಿಕ ಎಂದರೆ ಸಾರ್ವಜನಿಕ. ಕಾರಣ, ಖಾಸಗಿ ಎನ್ನಬಹುದಾದ ಬರಹಗಳಲ್ಲಿ ಕೂಡ ಲಂಕೇಶ್ ಓದುಗ ಓದುಗಿಯರ ನಿತ್ಯದ ಕಷ್ಟ ಸುಖಗಳಿಗೆ ದನಿಯಾಗುತ್ತಲೇ ಇರುತ್ತಾರೆ. ಆದ್ದರಿಂದ ಇವು ಸಾರ್ವತ್ರಿಕ. 

ತಮ್ಮ ಬದುಕಿನ ಕೊನೆಯ ಸಂಜೆ ಅವರು ಬರೆದ ‘ಈ ಸಂಚಿಕೆ’ ಅಂಕಣಕ್ಕೆ ಕೊಟ್ಟ ತಲೆ ಬರಹ: ‘ಶ್ರೇಷ್ಠ ಗದ್ಯ ಎಂಬ ಶ್ರೇಷ್ಠ ಕಲೆ’. ಲಂಕೇಶರಿಗೆ ಉಳಿದಿದ್ದ ಕೊನೆಯ ಗಂಟೆಗಳ ಈ ಬರಹದಲ್ಲಿ ಅವರ ಇಡೀ ಬದುಕಿನ, ಇಪ್ಪತ್ತು ವರ್ಷದ ಪತ್ರಿಕೋದ್ಯಮದ, ಹಾಗೂ ಇಪ್ಪತ್ತು ವರ್ಷ ಬರೆದ ಟೀಕೆ-ಟಿಪ್ಪಣಿಯ ಮೂಲ ಕಾಳಜಿಗಳ ತುಣುಕುಗಳಿವೆ.  ಅವತ್ತಿನ ’ಈ ಸಂಚಿಕೆ’ ಅಂಕಣದಲ್ಲಿರುವ ಒಂದು ನೋಟ:  
‘ನಾವೆಲ್ಲ ಮಹಾ ಸಿಟ್ಟಿನ, ತಪ್ಪು ತಿಳಿಯುವ, ಗೊಂದಲದ ಮನುಷ್ಯರು ಎಂದು ನಾನು ಬಲ್ಲೆ. ಆದ್ದರಿಂದಲೇ ನಾವು ಸಾಂಸ್ಕೃತಿಕವಾಗಿ ಮುಖ್ಯವಾದವರ ಬಗ್ಗೆ ಮಾತಾಡುವಾಗ ಗಾಢವಾಗಿ ಚಿಂತಿಸಬೇಕು. ನಮ್ಮನ್ನು ಹೊಗಳುವವರನ್ನೆಲ್ಲ ಹೊಗಳುತ್ತಾ ಕೂರಬಾರದು… ಎಂಥೆಂಥ ಜನ ಇದ್ದಾರೆ ನೋಡಿ! ಅವರು ಎಂದೂ ಏನನ್ನೂ ಓದುವುದಿಲ್ಲ… ನಾವು ನಮ್ಮ ಸಮಕಾಲೀನರಲ್ಲಿ ಯಾರಿಗೆ ಏನು ಸಲ್ಲಬೇಕೋ ಅದನ್ನು ಸಲ್ಲಿಸಿಬಿಡಬೇಕು. ಅವರ ಸಾಧನೆಯ ಬಗ್ಗೆ, ತಾತ್ಸಾರ ಪಡಕೂಡದು.’ 

ಕನ್ನಡದ ಶ್ರೇಷ್ಠ ಲೇಖಕನೊಬ್ಬನ ಆರಂಭದ ಕಾಳಜಿಗಳು ಮಾಗಿ ಕೊನೆಯ ಸಂಜೆಯವರೆಗೂ ಜೀವಂತವಾಗಿದ್ದುದನ್ನು ಈ ಕೊನೆಯ ಟಿಪ್ಪಣಿಯೂ ಸೂಚಿಸುತ್ತದೆ. ಮೇಷ್ಟ್ರು, ಕತೆಗಾರ, ಕವಿ ನಾಟಕಕಾರ, ವಿಮರ್ಶಕ, ಸಂಪಾದಕ ಮುಂತಾದ ಹಲವು ಪಾತ್ರಗಳು ಬೆರೆತ ಸಂಕೀರ್ಣ ವ್ಯಕ್ತಿತ್ವದಿಂದ ಮೈದಾಳಿದ ಈ ಕಾಳಜಿಗಳು ಕೊನೆತನಕ ಗಾಢವಾಗಿದ್ದವು. ಅವರು ಸಂಪಾದಿಸಿದ ಲಂಕೇಶ್ ಪತ್ರಿಕೆಯ ಕೊನೆಯ ಸಂಚಿಕೆಯಲ್ಲಿ ಪ್ರಕಟವಾದ ‘ನೀಲು’ ಪದ್ಯ:  

ಸಾಧು ಸಂತರು ಜಂಗಮರು ಗುರುಗಳು
ತಾವು ಕಟ್ಟಿಕೊಂಡು ಹುಟ್ಟಿದ
ಲೈಂಗಿಕ ಭಾಗ್ಯದ ಬಗ್ಗೆ 
ಆಶೆ, ಹತಾಶೆಯಲ್ಲಿ ನರಳುವರು. 

ಈ ನೀಲು ಪದ್ಯ ಸೂಚಿಸುತ್ತಿರುವ ಆಶೆ ಹತಾಶೆಗಳ ಶೋಧನೆಗಳ ನಡುವೆಯೇ ಕಟ್ಟುವ, ಬದಲಿಸುವ, ಬದಲಾಗುವ ನೈತಿಕ ಕಾಳಜಿಗಳು ಲಂಕೇಶರ ಕೊನೆಯ ಬರಹದವರೆಗೂ ಇದ್ದವು. ಕಳೆದ ನಲವತ್ತು ವರ್ಷಗಳಲ್ಲಿ ಈ ಟೀಕೆ ಟಿಪ್ಪಣಿಗಳಿಂದ ಸಾವಿರಾರು ಜನ ಲೇಖಕ, ಲೇಖಕಿಯರು ಅಂಕಣ, ಸಂಪಾದಕೀಯ, ಗದ್ಯ, ಸಮಾಜವಿಮರ್ಶೆ, ಸಾಹಿತಿ-ಸಾಹಿತ್ಯಗಳನ್ನು ನೋಡುವ ಬಗೆಗಳು, ರಾಜಕೀಯ ವಿಶ್ಲೇಷಣೆಗಳು...ಮುಂತಾದವುಗಳ ಹಲವು ಮಾದರಿಗಳನ್ನು ಅರಿವಿದ್ದೋ ಅರಿವಿಲ್ಲದೆಯೋ ಕಲಿತಿದ್ದಾರೆ. ಚಿಂತಕ, ಚಿಂತಕಿಯರು ಸಮಾಜವಾದಿ ಚಿಂತನೆಯ ಹೊಸ ರೂಪಗಳನ್ನು ಅರಿತಿದ್ದಾರೆ. ಲಂಕೇಶರನ್ನು ತೆಳುವಾಗಿ ಅನುಕರಿಸಿ ಕನ್ನಡ ಮನಸ್ಸಿನ ಅಭಿರುಚಿ ಕೆಡಿಸಿದವರೂ ಇದ್ದಾರೆ. ಅದೇನೇ ಇದ್ದರೂ, ಕಾಲದ ಕನ್ನಡಿಯಂತಿರುವ ಈ ಬರಹಗಳನ್ನು ಮತ್ತೆ ಮತ್ತೆ ಓದುವ ಯಾರೇ ಆದರೂ ತೀವ್ರವಾಗಿ ಯೋಚಿಸುವ, ಒಳಹೊರಗನ್ನು ಬೆಸೆಯುವ ಬರಹದ ಕಲೆಯನ್ನು, ಬದುಕುವ ಕಲೆಯನ್ನು ಕಲಿಯಬಲ್ಲರು ಎಂಬುದು ನನ್ನ ನಂಬಿಕೆ.

ಟೀಕೆ ಟಿಪ್ಪಣಿಯ ಮೂರನೆಯ ಸಂಪುಟದ ಮುನ್ನುಡಿ ಬರೆದು ಮುಗಿಸಿದ ಇವತ್ತು ೮ ಮಾರ್ಚ್. ಲಂಕೇಶರ ಹುಟ್ಟು ಹಬ್ಬ. ಈ ಟಿಪ್ಪಣಿಯ ಮೂಡುಗಳನ್ನು ಇಲ್ಲಿ ಕೊಡಲು ಕಾರಣ: ಇದೇ ೧೫ ಮಾರ್ಚ್ ೨೦೨೬ರ ಭಾನುವಾರ ಮೂರೂ ಟೀಕೆ ಟಿಪ್ಪಣಿಗಳ ಪರಿಷ್ಕೃತ ಮುದ್ರಣಗಳ ಬಿಡುಗಡೆ. ಸ್ಥಳ: ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣ, ಬೆಂಗಳೂರು. ಬೆಳಗ್ಗೆ ೧೧ ಗಂಟೆ. 
ಬಿಡುವು ಮಾಡಿಕೊಂಡು ಬನ್ನಿ. ಅಳಿದುಳಿದ ಲಂಕೇಶರ ‘ಟೀಕೆ ಟಿಪ್ಪಣಿ’, ‘ಈ ಸಂಚಿಕೆ’ಯ ಬರಹಗಳನ್ನು ಪ್ರಕಟಿಸುವ ಬಗ್ಗೆ ಸಂಬಂಧಪಟ್ಟವರು ಮುಂದೆ ಯೋಚಿಸಬಹುದು.

Share on:

Comments

11 Comments



| ಚರಣ್

ಟೀಕೆ ಟಿಪ್ಪಣಿಯನ್ನು ಕೊಂಡುಕೊಳ್ಳಲು ಸುಮಾರ ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ. ಅಂಗಡಿ ಮಾರಾಟಗಾರರು ಪ್ರಿಂಟ್ ಆಗುತ್ತಿಲ್ಲ ಎಂದು ಹೇಳುತ್ತಿದ್ದಾಗ ಪ್ರಕಾಶಕರ ಮೇಲೆ ತೀವ್ರ ಕೋಪ ಬರುತ್ತಿತ್ತು. ಕಾರಣ ಕನ್ನಡದ ಹೊಸ ತಲೆಮಾರಿಗೆ ಇವತ್ತಿನ ಸಂದರ್ಭದಲ್ಲಿ ತಮ್ಮನ್ನೂ ಹಾಗೂ ಸುತ್ತಲಿನ ವಿದ್ಯಮಾನಗಳನ್ನೂ ಗ್ರಹಿಸಲು ಲಂಕೇಶರ ಬರಹಗಳಲ್ಲಿ ಸಾಧ್ಯವಿದೆ ಅನ್ನುವ ಒಂತರ ನಂಬಿಕೆ ನನ್ನಲ್ಲಿ ಬೇರೂರಿತ್ತು. ಅದಕ್ಕೆ ಕಾರಣ ಏನೂ ಅಂತ ಗೊತ್ತಿಲ್ಲ. P. Lankesh ಅನ್ನುವ ಹೆಸರಲ್ಲಿ ಇರುವ ಒತ್ತು ಹಾಗೂ ಅಷ್ಟಾಗಿ ಯಾರು ಇಟ್ಟುಕೊಳ್ಳದ ಹೆಸರು ಬಹುಶಃ ನನ್ನನ್ನು ಸೆಳೆದಿರಬಹುದು. ಈಗ ಈಗ ನಿಮ್ಮ "ಇಂತಿ ನಮಸ್ಕಾರ" ಪುಸ್ತಕ ಓದುತ್ತಾ ಓದುತ್ತಾ ಸಾಹಿತಿಯನ್ನು ಸಾಹಿತ್ಯವನ್ನು boring ಅಲ್ಲದ ರೀತಿಯಲ್ಲಿ, ಅನ್ನಿಸಿದ್ದನ್ನು ಅನ್ನಿಸಿದಂಗೆ ಹೇಳುವಾಗ ಸ್ವಲ್ಪ objectivity ಕಾಯ್ದುಕೊಳ್ಳಬಹುದು ಅಂತ ಕಲಿಯುತ್ತಿದ್ದಾಗ ಟೀಕೆ ಟಿಪ್ಪಣಿ ಓದಬೇಕೆಂಬ ಆಕರ್ಷಣೆ ಮತ್ತಷ್ಟು ಹೆಚ್ಚಿರಬಹುದು. ಆದ್ದರಿಂದ ಇಂತಹ ಮುಖ್ಯ ಲೇಖಕರ ವಿಚಾರಧಾರೆಗಳು ಲಭ್ಯ ಯಾಕಿಲ್ಲ ಅನ್ನೋ ಸಿಟ್ಟು ಸಹಜವಾಗಿ ಬಂದಿತ್ತು. ಕಳೆದ ವರ್ಷದಿಂದ ಇಂದಿರಾ ಲಂಕೇಶ್ ಪ್ರಕಾಶನದ ಕಾರ್ತಿಕ್ ಅವರಿಗೆ "ಯಾವಾಗ ಬರುತ್ತದೆ ಸರ್" ಅಂತ ಪೀಡಿಸುತ್ತಿದ್ದೆ! ಈಗ ಇದು ಸಮಗ್ರವಾಗಿ ಜನಾರ್ಪಣೆ ಆಗುತ್ತಿರೋದು ತುಂಬಾ ಖುಷಿ ತಂದಿದೆ. ಲಂಕೇಶರು ಹೊಸ ತಲೆಮಾರಿನ ಕನ್ನಡಿಗರ ಸ್ವತ್ತಾಗೋದು ನಮ್ಮ ಬುದ್ದಿಭಾವಗಳ refreshment ಗೆ ಅವಶ್ಯಕ ಎಂಬುದು ನನ್ನ ನಂಬಿಕೆ.


| ಹರಿಪ್ರಸಾದ್ ಬೇಸಾಯಿ

ಲಂಕೇಶರ ಬಗ್ಗೆ ಏನಾದರೂ ಓದಲು ಆಸಕ್ತಿಕಾರಕ. ಆದರೂ ಮ್ಯೂಸಿಕ್ ಜಾಸ್ತಿ ಆಗಿದೆ... ಮಿಯಾಂವ್


| Mahesh NC

Truly speaking I was quiet disappointed about third volume of Teeke Tippani selections. Hope this revised collection rectify the previous collection mistake. Happy to hear that EE Sanchike columns are included. NH Meshtru compiling is always trustworthy. And this column is beautifully written with insights. Always feels proud that I was one of his student.


| ನಾರಾಯಣ್ ಕ್ಯಾಸಂಬಳ್ಳಿ

ವಂದನೆಗಳು ಸರ್ 🙏


| Aiyasha

ಎಂಎ ತರಗತಿಗಳಲ್ಲಿ ಓದಿದ ನೆನಪಾಗುತ್ತದೆ .ಆದರೆ ಲೇಖಕರ ಟಿಕೆ ಟಿಪ್ಪಣಿಯೇ ನಮ್ಮ ಕಣ್ಣಿಗೆ ಎದುರಾಗುತ್ತದೆ.


| ರಾಮಚಂದ್ರ ನಾಯಕ

ನನಗೆ ಚಿಂತನೆಯ ಹರಿವು ಹುಟ್ಟಿಸಿದ್ದು ಲಂಕೇಶ್ ಪತ್ರಿಕೆ, ಹೀಗೂ ಯೋಚಿಸಬಹುದು ಎಂಬ ಅರಿವು ಮೂಡಿಸಿದವರು ಲಂಕೇಶ್, ಅವರ ರೀತಿ ನಮಗೆ ಬದುಕಲು ಸಾಧ್ಯವಿಲ್ಲ, ಆದರೆ ಅವರ ಚಿಂತನೆಗಳು ನಮ್ಮನ್ನು ಪ್ರಭಾವಿಸುವುದಂತೂ ದಿಟ


| ಗುರು ಜಗಳೂರು

ಲಂಕೇಶರನ್ನು ಹತ್ತಿರದಿಂದ ಬಲ್ಲ ನಿಮ್ಮ ಬರಹ ಹೆಚ್ಚು ಆಪ್ತವಾಗಿದೆ.ಟೀಕೆ ಟಿಪ್ಪಣಿ 3 ( ಹೆಸರೇ ವಿಶೇಷವಾಗಿದೆ) ಮರು ಮುದ್ರಣ ಸಂತೋಷವನ್ನು ಉಂಟು ಮಾಡುತ್ತದೆ.ಹಾಗೆಯೇ " ಸಾಹಿತ್ಯ,ಸಾಹಿತಿ ,ವಿಮರ್ಶೆ" ಕೃತಿ? ಇದು ಎಲ್ಲಿಯೂ ಇಲ್ಲ.ಮೇಲಿನ ಬರಹದಲ್ಲಿನ ಹಾದಿಮನಿಯವರ ಚಿತ್ರ ( ಲಂಕೇಶರ ನಿರ್ಗಮನ ) ಕಾಡಿನ ಹುಲಿಯ ನಿರ್ಗಮನದ ರೀತಿ ಇದೆ. 2026-03-12


| ಡಾ. ನಿರಂಜನ ಮೂರ್ತಿ ಬಿ ಎಂ

ಪ್ರೊ. ಲಂಕೇಶರ ಟೀಕೆ ಟಿಪ್ಪಣಿಗಳ ಹೊಸ ಮುದ್ರಣ ಬಿಡುಗಡೆಯಾಗುತ್ತಿರುವುದು ತಿಳಿದು ತುಂಬಾ ಸಂತೋಷವಾಯಿತು. ಬಿಡುಗಡೆಯ ಕಾರ್ಯಕ್ರಮ ಅದ್ಭುತ ಯಶಸ್ಸನ್ನು ಪಡೆಯಲಿ. ಅವರು ಸಂಪಾದಿಸಿದ ಅವರ ಲಂಕೇಶ್ ಪತ್ರಿಕೆಯ ಕೊನೆಯ ಸಂಚಿಕೆಯ ನೀಲು ಕವನ ತುಂಬಾ ಚೆನ್ನಾಗಿದೆ. ಅವರ ಎಲ್ಲಾ ನೀಲು ಕವಿತೆಗಳನ್ನು ಪುನಃ ಓದಿ ಆನಂದಿಸಬೇಕೆನಿಸಿದೆ.


| ಸುನೀಲ

ಮಾಗಿದ ಮನಸಿಗೆ ಬಯಕೆಯ ಬಳ್ಳಿ ಬಳುವಳಿ ತೊಡರುಲು ಹಿರಿ ಕಿರಿ ಬೆಸುಗೆಯ ಸಾಲುವಳಿ ಇದ್ದೂ ಇರದ ಇರದೇ ಇದ್ದ ಬಯಸುವ ಆದರೆ ಕಾಣದ ಬಯಸದ ಆದರೆ ಬೆಸೆಯುವ ದೇಹ ಭಾವಗಳ ಬೆಸುಗೆಯ ಸಂಗಮ ನಾವು ಕಂಡೆವೆಂಬ ಅನಿಸಿಕೆಯ ಜಂಗಮ


| Talya

ಮೇಷ್ಟ್ರ ಬಗೆಗಿನ ನಿಮ್ಮ ಬರಹ ನನ್ನಲ್ಲಿ ಹಳೆಯ ನೆನಪುಗಳು ನುಗ್ಗಿ ಬರುವಂತೆ ಮಾಡಿತು. ಟೀಕೆ ಟಿಪ್ಪಣಿಯನ್ನು ಮೊದಲ ಸಂಚಿಕೆಯಿಂದ ಕೊನೆಯ ಸಂಚಿಕೆಯವರೆಗೂ ಒಂದನ್ನೂ ಬಿಡದೆ ಓದಿದ್ದೆ. ಅವರ ಹಲವು ಸಂಜೆಗಳಲ್ಲಿ, ಹುಟ್ಟು ಹಬ್ಬದಲ್ಲಿ ಭಾಗವಹಿಸಿದ್ದೆ. ಅವರಿದ್ದ ಕಾಲದಲ್ಲಿ ಅವರ ಸಮೀಪ ಇದ್ದೆವಲ್ಲ ಅದೇ ದೊಡ್ಡ ಭಾಗ್ಯ. ಕೊನೆಯವರೆಗೂ ಈ ಹೆಮ್ಮೆ ನನ್ನ ಎದೆಯೊಳಗೆ ಇದ್ದೇ ಇರುತ್ತದೆ.


| Talya

ಮೇಷ್ಟ್ರ ಬಗೆಗಿನ ನಿಮ್ಮ ಬರಹ ನನ್ನಲ್ಲಿ ಹಳೆಯ ನೆನಪುಗಳು ನುಗ್ಗಿ ಬರುವಂತೆ ಮಾಡಿತು. ಟೀಕೆ ಟಿಪ್ಪಣಿಯನ್ನು ಮೊದಲ ಸಂಚಿಕೆಯಿಂದ ಕೊನೆಯ ಸಂಚಿಕೆಯವರೆಗೂ ಒಂದನ್ನೂ ಬಿಡದೆ ಓದಿದ್ದೆ. ಅವರ ಹಲವು ಸಂಜೆಗಳಲ್ಲಿ, ಹುಟ್ಟು ಹಬ್ಬದಲ್ಲಿ ಭಾಗವಹಿಸಿದ್ದೆ. ಅವರಿದ್ದ ಕಾಲದಲ್ಲಿ ಅವರ ಸಮೀಪ ಇದ್ದೆವಲ್ಲ ಅದೇ ದೊಡ್ಡ ಭಾಗ್ಯ. ಕೊನೆಯವರೆಗೂ ಈ ಹೆಮ್ಮೆ ನನ್ನ ಎದೆಯೊಳಗೆ ಇದ್ದೇ ಇರುತ್ತದೆ.




Add Comment


Mundana Kathana Nataka

YouTube






Recent Posts

Latest Blogs