ಕವರ್ ಟು ಕವರ್ ಓದುವುದು!

 ಲೇಖಕಿಯೊಬ್ಬರು ಫೋನ್ ಮಾಡಿ, ‘ಡಾಕ್ಟರ್ ಸಾಹೇಬ್ ಲೋಹಿಯಾ ಜೀವನಚರಿತ್ರೆ ಓದಿದೆ’ ಎಂದರು.

‘ಎಷ್ಟು ಪುಟ? ಕವರ್ ಟು ಕವರ್ ಓದಿದ್ದರೆ ಚೆನ್ನಾಗಿರೋದು' ಅಂದೆ.

‘ಇದೇನು ಹೀಗೆ ಕೇಳ್ತೀರಿ? ಫುಲ್!’ ಎಂದರು ಅವರು. 

‘ಫೈನ್!’ 

ಮೂರು ವಾರಗಳ ಕೆಳಗೆ ಗುಲಬರ್ಗಾದಲ್ಲಿ ಸಿಕ್ಕ ಹಿರಿಯ ರಾಜಕಾರಣಿ ಬಿ. ಆರ್. ಪಾಟೀಲ್ ‘ಆರನೇ ಚಾಪ್ಟರ್ ಮುಗಿಸಿದೆ’ ಅಂದರು. ಮತ್ತೊಬ್ಬ ಹಿರಿಯ ರಾಜಕಾರಣಿ ಕಿಮ್ಮನೆ ರತ್ನಾಕರ್ ಐದು ದಿನಗಳ ಕೆಳಗೆ, ‘ಇನ್ನೂರು ಪುಟ ಮುಗಿಸಿದೆ’ ಅಂದರು. ಹರೀಶ್ ಮೂರೇ ದಿನದಲ್ಲಿ ಪೂರಾ ಓದಿದ್ದರ ಬಗ್ಗೆ ಹೇಳಿದ್ದರು. ಎಷ್ಟೋ ವರ್ಷಗಳಿಂದ ಓದಿ ಟಿಪ್ಪಣಿ ಮಾಡಿ, ಕಳೆದ ಮೂರು ವರ್ಷಗಳಿಂದ ಆಗಾಗ್ಗೆ ಬರೆದು ತಿದ್ದಿದ ಈ ಐನೂರು ಪುಟಗಳ ಪುಸ್ತಕವನ್ನು ಹಲವು ಹಿನ್ನೆಲೆಯವರು ಓದುತ್ತಿದ್ದಾರೆ ಎನ್ನುವುದು ಬರೆದವನಲ್ಲಿ ಧನ್ಯತೆ ಹುಟ್ಟಿಸುತ್ತದೆ.

ದೇಶದ-ವಿಶ್ವದ ಒರಿಜಿನಲ್ ಚಿಂತಕ-ನಾಯಕರಲ್ಲೊಬ್ಬರಾದ ಲೋಹಿಯಾರ ಕನ್ನಡ ಬಯಾಗ್ರಫಿಯನ್ನು ‘ಕವರ್ ಟು ಕವರ್ ಓದಿ’ ಎಂದು ಈಚೆಗೆ ಗೆಳೆಯ ಗೆಳತಿಯರಿಗೆ ಹೇಳಿದ್ದು ಅದು ನಾನು ಬರೆದ ಪುಸ್ತಕ ಎಂಬುದಕ್ಕಲ್ಲ; ಬದಲಿಗೆ, ಮಹಾನ್ ಚಾರಿತ್ರಿಕ ವ್ಯಕ್ತಿತ್ವದ ಜೀವನ ಚರಿತ್ರೆಯ ಮೂಲಕ ಆ ಕಾಲದ ಚರಿತ್ರೆಯೂ ನಮ್ಮ ಅರಿವಿಗೆ ಬರುತ್ತಿರುತ್ತದೆ ಎಂಬ ಕಾರಣಕ್ಕಾಗಿ. ನನಗಂತೂ ನಾನು ಓದಿರುವ ಹತ್ತಾರು ಪುಸ್ತಕಗಳ ಜ್ಞಾನ, ಸೂಕ್ಷ್ಮ ವಿವರಗಳು ದಕ್ಕಿರುವುದು ಕವರ್ ಟು ಕವರ್ ಓದಿನಿಂದಲೇ ಎಂಬ ಅನುಭವದಿಂದ ಈ ಮಾತು ಹೇಳುತ್ತಿರುವೆ. 

ನಾವು ಅನೇಕ ಪುಸ್ತಕಗಳನ್ನು ಅಲ್ಲಲ್ಲಿ ಓದುವುದು ಕೂಡ ನಡೆಯುತ್ತಿರುತ್ತದೆ. ತಮಗೆ ಹಿಡಿಸುವ ಪುಸ್ತಕಗಳನ್ನು, ಅದರಲ್ಲೂ ಜೀವನಚರಿತ್ರೆ, ಕಾದಂಬರಿಗಳನ್ನು, ‘ಕವರ್ ಟು ಕವರ್‍’ ಓದುವ ಅನುಭವ ಕೂಡ ಎಲ್ಲರಿಗೂ ಇರುತ್ತದೆ ಮೊನ್ನೆ ನವಂಬರ್‍ ೧೦ ರ ರಾತ್ರಿ ೧೦. ೩೦ರ ಹೊತ್ತಿಗೆ ನನ್ನ ಕೈಗೆ ಸಿಕ್ಕ ಸೋನಿಯಾಗಾಂಧಿಯವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಆತ್ಮಕಥಾ ನೆನಪುಗಳ [ಮೆಮೊಯ್‌ರ್‍ಸ್] ಪುಸ್ತಕವನ್ನು ಮೂರೂವರೆ ದಿನದಲ್ಲಿ ಪಟ್ಟು ಬಿಡದೆ ಓದಿದೆ; ಇದೀಗ ಮತ್ತೆ ಕವರ್ ಟು ಕವರ್ ಓದಿನ ಅರ್ಥಪೂರ್ಣತೆ ಅರಿವಾಗತೊಡಗಿತು. ಈ ಹಿನ್ನೆಲೆಯಲ್ಲಿ ಕವರ್ ಟು ಕವರ್ ಓದಿನ ಬಗೆಗೆ ವಿವರವಾಗಿ ಬರೆದರೆ, ಉಳಿದವರಿಗೂ ಉಪಯುಕ್ತವಾಗಬಹುದು ಎನ್ನಿಸಿ ಆ ಕುರಿತ ಟಿಪ್ಪಣಿ: 

ಹಿಂದೊಮ್ಮೆ ಸಂದರ್ಶಕನೊಬ್ಬ ಫ್ರೆಂಚ್ ನಿರಚನಾವಾದಿ-ಚಿಂತಕ ಜಾಕ್ವೆಸ್ ಡೆರಿಡಾನ ಮನೆಯ ಲೈಬ್ರರಿ ನೋಡಿ ಕೇಳಿದ ಮಾತನ್ನು ಅಂಕಣವೊಂದರಲ್ಲಿ ಬರೆದಿದ್ದೆ:

ಸಂದರ್ಶಕ: (ವಿಸ್ಮಯದಿಂದ) ಇವನ್ನೆಲ್ಲ ಓದಿದೀರಾ ಜಾಕ್ವೆಸ್? 

ಡೆರಿಡಾ: ಇಲ್ಲ. ಇದರಲ್ಲಿ ನಾಲ್ಕೇ ನಾಲ್ಕು ಪುಸ್ತಕ ಓದಿದೀನಿ- ಆದರೆ ಅವನ್ನು ಕ್ಲೋಸಾಗಿ ಓದಿದೀನಿ.

ಇಪ್ಪತ್ತೇಳು ವರ್ಷಗಳ ಕೆಳಗೆ ಚಕಿತಗೊಳಿಸಿದ ಈ ಡೆರಿಡಾ ಮಾತು ನನ್ನೊಳಗೆ ಗಾಢವಾಗಿ ಉಳಿದಿದೆ. ಡೆರಿಡಾ ತಾನು ಕ್ಲೋಸಾಗಿ ಓದಿದ ನಾಲ್ಕು ಪುಸ್ತಕಗಳು ಯಾವುವು ಎಂಬುದನ್ನು ಅವತ್ತು ಹೇಳಿದಂತಿಲ್ಲ. ಆ ನಾಲ್ಕು ಪುಸ್ತಕಗಳಲ್ಲಿ ಕಾರ್ಲ್ ಮಾರ್ಕ್ಸ್-ಏಂಗೆಲ್ಸ್ ಬರೆದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಅಥವಾ ಮಾರ್ಕ್ಸ್ ಬರೆದ ‘ದಾಸ್ ಕ್ಯಾಪಿಟಲ್’ ಇರಬಹುದು ಎಂಬುದು ನನ್ನ ಊಹೆ. ಡೆರಿಡಾ ‘ಸ್ಪೆಕ್ಟರ್‍ಸ್ ಆಫ್ ಮಾರ್ಕ್ಸ್’ ಎಂಬ ಮಹತ್ವದ ಪುಸ್ತಕ ಬರೆದಿರುವ ಆಧಾರದ ಮೇಲೆ ಈ ಊಹೆ ಮಾಡುತ್ತಿದ್ದೇನೆ. ಆದರೂ ಡೆರಿಡಾ ಹೇಳಿದ ಮಾತನ್ನು ಅಕ್ಷರಶಃ ಓದಿ, ‘ನಾಲ್ಕೇ ಪುಸ್ತಕ’ ಎಂದು ತಿಳಿಯಬೇಕಿಲ್ಲ; ಮಹತ್ವದ ಪುಸ್ತಕಗಳನ್ನು ತೀರಾ ನಿಕಟವಾಗಿ ಓದುವ ಬಗ್ಗೆ ಡೆರಿಡಾ ರೂಪಕದಲ್ಲಿ ಮಾತಾಡುತ್ತಿದ್ದಾನೆ ಎಂದುಕೊಳ್ಳಬೇಕು. 

ಕಾರಣ, ಡೆರಿಡಾ ತನಗೆ ಮಹತ್ವ ಎನ್ನಿಸಿದ ಪುಸ್ತಕಗಳನ್ನು ಕವರ್ ಟು ಕವರ್ ಓದದಿದ್ದರೆ, ಲೋಕದ ದೊಡ್ಡ ಚಿಂತಕನಾಗಿ ಬೆಳೆಯುತ್ತಿರಲಿಲ್ಲ. ಅಥವಾ ಲೋಹಿಯಾ ತಾರುಣ್ಯದಲ್ಲಿ ಜರ್ಮನಿಯಲ್ಲಿದ್ದಾಗ ಜರ್ಮನ್ ಭಾಷೆ ಕಲಿತು ಮಾರ್ಕ್ಸ್‌ನ ‘ದಾಸ್ ಕ್ಯಾಪಿಟಲ್’ ಪುಸ್ತಕವನ್ನು ಕವರ್‍ ಟು ಕವರ್‍ ಓದದಿದ್ದರೆ ‘ಮಾರ್ಕ್ಸ್ ನಂತರದ ಅರ್ಥಶಾಸ್ತ್ರ’ (ಅನುವಾದ: ಕೆ.ಪುಟ್ಟಸ್ವಾಮಿ) ಎಂಬ ಮಹತ್ವದ ಸುದೀರ್ಘ ಪ್ರಬಂಧ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಅಂಬೇಡ್ಕರ್ ತಮಗೆ ಮಹತ್ವದವು ಎನ್ನಿಸಿದ ಹಲವು ಪುಸ್ತಕಗಳನ್ನು ಕವರ್ ಟು ಕವರ್ ಓದದಿದ್ದರೆ ಸಮುದಾಯಪರಿವರ್ತನೆಯ ದೊಡ್ಡ ಚಿಂತಕ-ನಾಯಕರಾಗಿ ಮೂಡುತ್ತಿರಲಿಲ್ಲ. ಮೋಹನದಾಸ್ ಕರಮಚಂದ ಗಾಂಧಿ ಒಂದು ದಿನ ಜೋಹಾನ್ಸ್‌ಬರ್ಗ್ ರೈಲ್ವೇ ಸ್ಟೇಶನ್ನಿನಲ್ಲಿ ಹೆನ್ರಿ ಪೊಲಾಕ್ ಕೊಟ್ಟ ಜಾನ್ ರಸ್ಕಿನ್‌ನ ‘ಅನ್ ಟು ದಿಸ್ ಲಾಸ್ಟ್’ ಪುಸ್ತಕವನ್ನು  ಎಡೆಬಿಡದೆ ಓದದಿದ್ದರೆ, ಕಟ್ಟ ಕಡೆಯ ವ್ಯಕ್ತಿಯ ವಿಮೋಚನೆಯ ದೃಷ್ಟಿಯಿಂದ ಅವರು ರೂಪಿಸಿದ ಚಿಂತನೆಗಳ ಬೀಜ ಅವರಲ್ಲಿ ಮೊಳೆಯುತ್ತಿರಲಿಲ್ಲ. 

ಇಂಥ ಉದಾಹರಣೆಗಳನ್ನು ನೀವೂ ನಿಮ್ಮ ‘ಓದುಬದುಕಿನಲ್ಲಿ’ ಹುಡುಕಿಕೊಳ್ಳಬಹುದು. ನನ್ನದೇ ಉದಾಹರಣೆ ಕೊಡುವುದಾದರೆ, ನನ್ನ ಡಾಕ್ಟರಲ್ ಸಂಶೋಧನೆಯ ಕಾಲದಲ್ಲಿ ಅಶೀಶ್ ನಂದಿಯವರ ‘ದ ಇಂಟಿಮೇಟ್ ಎನಿಮಿ’ ಥರದ ಪುಸ್ತಕವನ್ನು ಕವರ್ ಟು ಕವರ್ ಓದದಿದ್ದರೆ, ಈ ಥರದ ಪುಸ್ತಕದ ಭಾಗಗಳನ್ನು ನಿರಂತರವಾಗಿ ಗುರುತು ಹಾಕಿಕೊಂಡು, ಕಷ್ಟ ಪಟ್ಟು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದಿದ್ದರೆ, ಆಫ್ರಿಕಾ ಹಾಗೂ ಭಾರತದಲ್ಲಿ ಉಂಟಾದ ವಸಾಹತುಶಾಹಿಯ ಸಂಕೀರ್ಣ ಪರಿಣಾಮಗಳು ಇಷ್ಟಾದರೂ ನನಗೆ ಅರ್ಥವಾಗುತ್ತಿರಲಿಲ್ಲ. 

ನಾವೆಲ್ಲರೂ ಕತೆ, ಕವಿತೆ, ಪ್ರಬಂಧಗಳ ಸಂಕಲನಗಳನ್ನು ಓದುವಾಗ ಆಯ್ದ ಕತೆ, ಕವಿತೆಗಳನ್ನು ಓದುವುದುಂಟು. ಆದರೂ ಒಬ್ಬ ದೊಡ್ಡ ಕತೆಗಾರ, ಕವಿಯ ವಿಶಿಷ್ಟ ಲೋಕದೃಷ್ಟಿ ಅರ್ಥವಾಗಬೇಕೆಂದರೆ ಅವನ್ನು ಪೂರ್ಣವಾಗಿ ಓದಬೇಕಾಗುತ್ತದೆ. ಉದಾಹರಣೆಗೆ, ಮಾರ್ಕ್ವೆಜ್ ಕತೆಗಳು; ಬೇಂದ್ರೆ, ಎಲಿಯಟ್, ಶಿವಪ್ರಕಾಶರ ಕವಿತೆಗಳು, ಲಂಕೇಶರ ‘ಟೀಕೆ ಟಿಪ್ಪಣಿ’…ಹೀಗೆ.

ಇಷ್ಟಾಗಿಯೂ, ಎಲ್ಲರೂ ಎಲ್ಲ ಪುಸ್ತಕಗಳನ್ನೂ ಕವರ್ ಟು ಕವರ್ ಓದುವುದು ಅಸಾಧ್ಯ, ನಿಜ. ಅನೇಕ ಪುಸ್ತಕಗಳು ಆ ಬಗೆಯ ಪೂರ್ಣ ಓದಿಗೆ ಅರ್ಹವೂ ಆಗಿರುವುದಿಲ್ಲ. ಹಿಂದೊಮ್ಮೆ ಶ್ರೀರಂಗರು ‘ಪ್ರಜಾವಾಣಿ’ಗೆ ಪುಸ್ತಕ ವಿಮರ್ಶೆ ಬರೆಯುತ್ತಿದ್ದಾಗ ಬಳಸಿದ ಒಂದು ಬಣ್ಣನೆಯನ್ನು ಕಿ.ರಂ. ನಾಗರಾಜ್ ನೆನಪಿಸಿದ್ದರು: ‘ಒಮ್ಮೆ ಕೆಳಗಿಟ್ಟರೆ ಎತ್ತಿಕೊಳ್ಳಲಾಗದ ಪುಸ್ತಕ!’ 

ಪುಸ್ತಕಗಳನ್ನು ಓದಿ ಓದಿ ನುರಿತ ಕಣ್ಣಿಗೆ ಒಂದು ಪುಸ್ತಕದಲ್ಲಿ ಯಾವುದನ್ನು ಹೆಕ್ಕಿಕೊಳ್ಳಬೇಕು ಎಂಬುದು ಬೇಗ ಹೊಳೆಯತೊಡಗುತ್ತದೆ. ಈ ಟಿಪ್ಪಣಿ ಬರೆಯುವ ಕಾಲಕ್ಕೆ ‘ಅಂಬೇಡ್ಕರ್‍: ದ ಅಟೆಂಡೆಂಟ್ಸ್ ಡಿಟೈಲ್ಸ್’ ಪುಸ್ತಕದಲ್ಲಿ ಅಂಬೇಡ್ಕರ್ ‘ಕವರ್ ಟು ಕವರ್' ಎಂಬ ಮಾತು ಬಳಸಿದ್ದು ಕಣ್ಣಿಗೆ ಬಿತ್ತು. ಅದು ಥಾಕರ್‍ಸ್ ಪ್ರಕಾಶನದ ಕಚೇರಿಯಲ್ಲಿ ಯು. ಆರ್‍. ರಾವ್- ಅಂಬೇಡ್ಕರ್‍ ನಡುವೆ ನಡೆದ ಮಾತುಕತೆ:

ಯು. ಆರ್. ರಾವ್: ಡಾಕ್ಟರ್! ಇಷ್ಟೊಂದು ಪುಸ್ತಕ ಕೊಂಡುಕೊಂಡು ಹೋಗ್ತೀರಲ್ಲ, ಇವನ್ನೆಲ್ಲ ಓದೋಕೆ ನಿಮಗೆ ಟೈಮೆಲ್ಲಿ ಸಿಗುತ್ತೆ?

ಅಂಬೇಡ್ಕರ್: ನಿಮ್ಮ ಪ್ರಕಾರ ರೀಡಿಂಗ್ ಅಂದರೇನು, ರಾವ್?

ಯು. ಆರ್. ರಾವ್: ಪೂರಾ ಪುಸ್ತಕ ಓದುವುದು, ಮೊದಲನೇ ಪೇಜಿನಿಂದ ಕೊನೇ ತನಕ ಓದಿ ಅರಗಿಸಿಕೊಳ್ಳುವುದು.

ಅಂಬೇಡ್ಕರ್: ನಾನು ಹಾಗೆ ಓದೋಲ್ಲ. ಕವರ್ ಟು ಕವರ್ ಓದಬೇಕಾದ, ಆಳವಾಗಿ ಅಧ್ಯಯನ ಮಾಡಬೇಕಾದ ಪುಸ್ತಕಗಳು ಕೆಲವೇ ಕೆಲವು ಇರುತ್ತವೆ. ಆದರೆ ನನಗೆ ಆಸಕ್ತಿ ಇರೋ ವಿಷಯದ ಬಗ್ಗೆ ಬಂದಿರೋ ಪುಸ್ತಕ ನೋಡ್ತೀನಿ ಎಂದಿಟ್ಟುಕೊಳ್ಳಿ; ಉದಾಹರಣೆಗೆ, ಸೋಷಲಿಸಂ ಬಗ್ಗೆ ಒಂದು ಪುಸ್ತಕ; ಅದರ ಬೆನ್ನುಡಿ, ಮುನ್ನುಡಿ, ಪರಿವಿಡಿ ಮೇಲೆ ಕಣ್ಣಾಡಿಸ್ತೀನಿ. ಈ ವಿಷಯದ ಬಗ್ಗೆ ಯಾವ ಯಾವ ಅಧ್ಯಾಯಗಳು ನನಗೆ ಹೊಸ ಆಲೋಚನೆ, ಹೊಸ ಐಡಿಯಾ ಕೊಡಬಲ್ಲವು ಅನ್ನೋದನ್ನು ತೀರ್ಮಾನ ಮಾಡ್ತೀನಿ. ಆ ಪುಟಗಳನ್ನ ಓದ್ತೀನಿ. ಉಳಿದಿದ್ದೆಲ್ಲ ನನಗೆ ಗೊತ್ತಿರೋದೇ ಆಗಿರುತ್ತೆ. ಆಗ ನಾನು ಆ ಪುಸ್ತಕ ಓದಿದೀನಿ ಅಂತ ಅರ್ಥ.’ 

ಆದರೆ ಅಂಬೇಡ್ಕರ್ ಥರದ ‘ವಿದ್ವಾಂಸಗಣ್ಣು’ ಬರುವ ತನಕ ನಮ್ಮ ನಮ್ಮ ಕ್ಷೇತ್ರದ ಹಲವು ಮುಖ್ಯ ಪುಸ್ತಕಗಳನ್ನು ಕವರ್ ಟು ಕವರ್ ಓದಿ ಅರಗಿಸಿಕೊಳ್ಳಲೇಬೇಕಾಗುತ್ತದೆ. ಇಲ್ಲದಿದ್ದರೆ ಅಂಬೇಡ್ಕರ್‌ ಥರದವರಿಗೆ ದಕ್ಕಿದ ಈ ಕ್ಷಿಪ್ರಗಣ್ಣಿನ ವಿವೇಕ ನಮಗೆ ದಕ್ಕುವುದಿಲ್ಲ. ನಮ್ಮ ಕಾಲದ ದೊಡ್ಡ ಕಮ್ಯುನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೊ ಕ್ಯೂಬಾದ ಕವಿ-ಲೇಖಕ ಜೋಸ್ ಮಾರ್ತಿಯ ಪುಸ್ತಕಗಳನ್ನು ‘ಮತ್ತೆ ಮತ್ತೆ ಓದಿ ಹಲವು ಪಾಠಗಳನ್ನು ಕಲಿಯುತ್ತಿರುತ್ತೇನೆ’ ಎಂದಿದ್ದು ನೆನಪಾಗುತ್ತದೆ.

ಸೆಮೈನಲ್ ಅಥವಾ ಯುಗಪ್ರವರ್ತಕ ಕೃತಿಗಳನ್ನು ‘ಕವರ್ ಟು ಕವರ್‍’ ಓದದಿದ್ದರೆ ಆ ಪುಸ್ತಕಗಳ ಆಳವಾದ ಜ್ಞಾನ ದಕ್ಕುವುದಿಲ್ಲ. ಹಾಗೆಂದು ಕೋಂಡ, ಕೊಟ್ಟವರ ಪುಸ್ತಕಗಳನ್ನು ಹೀಗೆ ಓದುವುದು ಸಾಧ್ಯವೂ ಇಲ್ಲ! ಪುಸ್ತಕವನ್ನು ಓದಿ ಮಾತಾಡುವವರ-ಬರೆವವರ ವಿಶ್ಲೇಷಣೆಗಳ ಸೂಕ್ಷ್ಮತೆ ಹಾಗೂ ಓದದೆ ಮಾತಾಡುವವರ ತೇಲುಮಾತುಗಳ ಹುಸಿತನ- ಇವುಗಳ ವ್ಯತ್ಯಾಸ ಎಲ್ಲರಿಗೂ ಕಾಣುತ್ತದೆ. ನಾವು ಯಾವ ಗುಂಪಿಗೆ ಸೇರಲು ಬಯಸುತ್ತೇವೆ ಎಂಬುದರ ಮೇಲೆ ಕೂಡ ನಮ್ಮ ‘ಓದು ವ್ಯಕ್ತಿತ್ವ’, ಅಕಡೆಮಿಕ್ ವ್ಯಕ್ತಿತ್ವ ರೂಪುಗೊಳ್ಳುತ್ತಿರುತ್ತದೆ. ಇದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ ಹಾಗೂ ಕೊಟ್ಟುಕೊಳ್ಳಬೇಕಾದ ಉತ್ತರ ಕೂಡ!

ಪಲ್ಲವ ಪ್ರಕಾಶನದ ಮಾಹಿತಿ:

ಪ್ರಿಯರೆ, ನಟರಾಜ್ ಹುಳಿಯಾರ್ ಬರೆದ 'ಡಾಕ್ಟರ್ ಸಾಹೇಬ್' ಲೋಹಿಯಾ  ಸಮಗ್ರ ಜೀವನ ಚರಿತ್ರೆಯ ಎರಡನೆ ಮುದ್ರಣ ಪ್ರಕಟವಾಗಿದೆ. ಐನೂರು ಪುಟಗಳ ಈ ಮಹತ್ವದ ಕೃತಿ ನಿಮಗೆ, ನಿಮ್ಮ ಗೆಳೆಯ‌ ಗೆಳತಿಯರಿಗೆ, ಸಂಸ್ಥೆಗಳಿಗೆ ವಿಶೇಷ ರಿಯಾಯಿತಿಯಲ್ಲಿ: 

ಅಂಚೆ ವೆಚ್ಚ ಸೇರಿ: ರೂ. 350  ಸಂಪರ್ಕ: ನರಸಿಂಹಮೂರ್ತಿ: 9480583913

Share on:

Comments

5 Comments



| ಚರಣ್‌

ಇನ್ಸ್ಪೈರಿಂಗ್ ಲೇಖನ ಸರ್. ಲೋಹಿಯಾರ ಜೀವನಚರಿತ್ರೆ ಬರೆಯುವುದಕ್ಕೆ ಸಂಶೋಧನೆಯಲ್ಲಿ ತೊಡಗಿದ್ದರಿಂದ ಓದುವ ವೇಗ ಗಂಟೆಗೆ ೭೦-೧೦೦ ಆಗಿದೆ ಎಂದು ತಾವು ಅಂದದ್ದು, ಇನ್ನು ಕಿವಿಯಲ್ಲಿ ಗುಂಯ್ಗುಡುತ್ತಿದೆ. ಇನ್ಮೇಲೆ "ಕವರ್ ಟು ಕವರ್" ಗುಂಯ್ಗುಡಬಹುದು. ನಮ್ಮ ಅರ್ಧಂಬರ್ಧದ ಓದು, ಅರ್ಧಂಬರ್ಧದ ಚಿಂತನೆ ಹಾಗೂ ವ್ಯಕ್ತಿತ್ವವನ್ನೇ ಸೃಷ್ಟಿಸುತ್ತದೆ ಎಂಬ ಒಳನೋಟ, ಎಚ್ಚರಿಕೆ ದಕ್ಕಿತು.


| ಭೀಮೇಶ ಯರಡೋಣಿ

ನಾವೇ ಹೇಗೆ ಓದಿದರೂ ನಮ್ಮ ವ್ಯಕ್ತಿತ್ವಕ್ಕೆ ಒಗ್ಗುವ ವಿಚಾರಗಳು ಮೈಮನದ ಭಾಗವಾಗುತ್ತವೆ. ನಮ್ಮ ವ್ಯಕ್ತಿತ್ವ ಹೇಗೆ ರೂಪುಗೊಳ್ಳಬೇಕು ಎಂಬ ಇಚ್ಛಾಶಕ್ತಿ ಅಥವಾ ದರ್ಶನ ಇದ್ದಾಗ ಮಾತ್ರ ಅದಕ್ಕಾಗಿ ನಿರಂತರ ಪ್ರಯತ್ನ, ಪರಿಶೀಲಿಸಿನೆ, ಪರಿಶ್ರಮ ಅಗತ್ಯ.


| ಭೀಮೇಶ ಯರಡೋಣಿ

it's all about depends on being and becoming


| Subramanyaswamy Swamy

ಕವರ್ ಟು ಕವರ್ ಎವರ್ ಎಂಬಂತೆ ಓದುವ ಆಯಾಮದ ಬಗ್ಗೆ ಓದುಗನಿಗೆ ಹೆಚ್ಚು ಹೂಳಹುಗಳ ಲೇಖನ , ವಿದ್ವಾಂಸಗಣ್ಣು ಪದಬಳಕೆ ತುಂಬಾ ಮಹತ್ವದ್ದು.


| Somashankara N

ನನ್ನಂಥವರಿಗೆ line by line ಓದಿ ಬರಹದಲ್ಲಿ ಜೀವಿಸಲು ನನ್ನ ನಾನು ಸಮರ್ಪಿಸಿಕೊಳ್ಳದಿದ್ದರೆ ಒಬ್ಬ ಶ್ರೇಷ್ಠ ಮಾದರಿ ಚಿಂತಕನ "ಜೀವನ ಚರಿತ್ರೆ"ಯಲ್ಲಿ ಓದು ಅಪರಿಪೂರ್ಣವಾಗಬಹುದು. ನಿನ್ನೆ ಓದಿದ್ದನ್ನು ಮತ್ತೆ ಹಿಂದಿನಿಂದ ಓದುವಾಗ ಅಥವಾ ಈಗ ಒಂದೇ ಉಸಿರಿಗೆ ಓದುತ್ತಿರುವಾಗಲೂ ಓದುವ ಕ್ರಮದಲ್ಲಿ energy generate ಆಗದ ಸಂದರ್ಭದಲ್ಲಿ ಮತ್ತೆ ಹಿಂದೆ ಸರಿದು energy backup ಮಾಡಿಕೊಂಡು ಓದುವಾಗ ಸಿದ್ದಿಸುವ ತಾದಾತ್ಮ್ಯತೆ ಮತ್ತು ಒಬ್ಬ ವ್ಯಕ್ತಿಯ ಚಾರಿತ್ರಿಕ ಪುಟಗಳು ದಕ್ಕಿಸಿ ಕೊಡುವ ವಿಭಿನ್ನವಾದ ಹೊಸತನಗಳು ನಮ್ಮನ್ನು ಮತ್ತೆ ಮತ್ತೆ ಕೈ ಹಿಡಿದು ಓದಿಸಿಕೊಂಡು ಸಾಗುವ ಕುತೂಹಲದ ಬೆರಗು ಮತ್ತು ಆ ಅಭಿರುಚಿಯ ಮಧುರತೆಯನ್ನು ವ್ಯಕ್ತಪಡಿಸಲು ಮಾತುಗಳಿಲ್ಲ. ನಾನು ಓದುವಾಗಲೆಲ್ಲ ನನ್ನೊಳಗಿನ ನೀವು ಕುಂಬಾರ ಮಡಿಕೆ ಮಾಡುವಾಗ ಮಡಿಕೆಯನ್ನು ಒಂದು ಆಕಾರಕ್ಕೆ ತರಲು ಮಡಿಕೆಯ ಒಳಗಿನಿಂದ ಕೈಯನ್ನು ಸಾಥ್ ಕೊಟ್ಟುಕೊಂಡು ಮೇಲಿನಿಂದ ಒಂದು ರೀತಿಯ ಮಟ್ಟಗೋಲಿನಿಂದ ಮಡಿಕೆಯ ತಲೆಯ ಮೇಲೆ ಲಟ್ಟಿಸಿ ತಟ್ಟಿ ತಟ್ಟಿ ಒಂದು ಆಕಾರಕ್ಕೆ ತರುವಂತೆ ಬರಹದ ಉದ್ದಕ್ಕೂ ಸಕ್ರಿಯ ರಾಗಿರುತ್ತೀರಿ ಎಂಬುದು ಸತ್ಯ. ಆ ಸಕ್ರಿಯತೆಯಲ್ಲಿಯೇ ನನ್ನ ಓದಿಗೆ ಕಾಪಿಡುವ ಶಕ್ತಿಯನ್ನೂ ನಾನು ಕಂಡುಕೊಂಡಿದ್ದೇನೆ. ಇದು ನನ್ನ ನಿಮ್ಮ ಬರಹದ ಓದಿನ ಅನುಭವ. ಥ್ಯಾಂಕ್ ಯು ಸರ್...




Add Comment


Mundana Kathana Nataka

YouTube






Recent Posts

Latest Blogs