ಅಲ್ಲಮ ಜೋಗಿಯ ಹಿಂದೆ ಡಿ. ಆರ್- ಗುಂಡೂರ್!

ಅಲ್ಲಮನ ಗುಂಗೇ ಹಾಗೆ! ಒಮ್ಮೆ ಅವನ ವಚನಲೋಕ ಹೊಕ್ಕೆವೆಂದರೆ ಮುಗಿಯಿತು: ಆ ವಚನಗಳ ಸೀಳುತೀಕ್ಷ್ಣತೆ, ಸೋಜಿಗದ ಪ್ರತಿಮಾವಳಿ, ಕನ್ನಡ ಭಾಷೆಯ ಮಾಯೆ, ವಿಸ್ಮಯಗೊಳಿಸುವ ಗೂಢ-ನಿಗೂಢ, ಕಾವ್ಯಶಕ್ತಿ, ಕಾವ್ಯಸತ್ಯ, ಫಟ್ಟಂತ ಚಿಮ್ಮುವ ಫಿಲಾಸಫಿ, ಹಿಂದೆಂದೂ ಕಂಡಿರದ ಒಳನೋಟ, ಹೊಸ ಸತ್ಯ…ಇತ್ಯಾದಿಗಳು ನಮ್ಮನ್ನು ಅವುಗಳೊಳಗೇ ಇರುವಂತೆ ಸೆಳೆದು, ಹೀರಿಕೊಳ್ಳುತ್ತಲೇ ಇರುತ್ತವೆ. 

ತಮ್ಮ ಮೂವತ್ತನೆಯ ವಯಸ್ಸಿನಿಂದಾಚೆಗೆ ಅಲ್ಲಮನ ಬೆನ್ನು ಹತ್ತಿರಬಹುದಾದ ಡಿ. ಆರ್. ನಾಗರಾಜ್ (೧೯೫೪-೧೯೯೮) ಇಪ್ಪತ್ತೆಂಟು ವರ್ಷಗಳ ಕೆಳಗೆ ‘ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ’ಯ ಅಪೂರ್ಣವೆನ್ನಬಹುದಾದ ಹಸ್ತಪ್ರತಿಯನ್ನು ಬಿಟ್ಟು ಹಟಾತ್ತನೆ ನಿರ್ಗಮಿಸಿದರು. ಅದನ್ನು ಅಚ್ಚಿಗೆ ಸಿದ್ಧಪಡಿಸುವ ಮಹತ್ತರ ಹೊಣೆ ಎಂ.ಎಸ್. ಆಶಾದೇವಿ, ಕಿ.ರಂ. ನಾಗರಾಜ್, ವೆಂಕಟ್ರಮಣ ಐತಾಳ ಮೊದಲಾದವರ ಮೇಲೆ ಬಿತ್ತು. ಕೆ.ವಿ. ಸುಬ್ಬಣ್ಣ ತಮ್ಮ ಅಕ್ಷರ ಪ್ರಕಾಶನದಲ್ಲಿ ಈ ಪುಸ್ತಕ ಪ್ರಕಟಿಸಿ ಚಾರಿತ್ರಿಕ ಕರ್ತವ್ಯ ಮಾಡಿದರು. ನಂತರ, ಕನ್ನಡ ಸಂಸ್ಕೃತಿಯ ಕೇಂದ್ರಪಠ್ಯಗಳಲ್ಲೊಂದಾಗಿ ಹಬ್ಬಿದ ಈ ಪುಸ್ತಕದ ಬಗ್ಗೆ ಡಿ. ಆರ್. ಕುರಿತ ನನ್ನ ಎರಡು ಪುಸ್ತಕಗಳಲ್ಲಿ ಬರೆದ ಕೆಲವು ಮಾತುಗಳು: 

‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಪುಸ್ತಕವನ್ನು ಓದುತ್ತಿರುವಾಗ ಅಮೆರಿಕನ್ ವಿಮರ್ಶಕ ಹೆರಾಲ್ಡ್ ಬ್ಲೂಮ್ ಜಗತ್ತಿನ ಮಹಾಪ್ರತಿಭೆಗಳನ್ನು ಕುರಿತು ಬರೆದ ‘ಜೀನಿಯಸ್’ ಪುಸ್ತಕದ ಕೇಂದ್ರ ಗ್ರಹಿಕೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ಬರಹಗಾರನೊಬ್ಬ ತನ್ನ ಆಳದಿಂದ ಸಂಧಿಸಿ, ತೀವ್ರವಾಗಿ ತನ್ಮಯವಾಗುವ ವಸ್ತುವಿಗೆ ಎದುರಾದಾಗ ಅವನ ಜೀನಿಯಸ್ ಉಕ್ಕಿ ಹರಿಯುತ್ತದೆ ಎಂಬುದನ್ನು ಬ್ಲೂಮ್ ಈ ಪುಸ್ತಕದುದ್ದಕ್ಕೂ ತೋರಿಸಿಕೊಡುತ್ತಾನೆ. ಅಲ್ಲಮಲೋಕವನ್ನು ಸಂಧಿಸಿದಾಗ ಡಿ.ಆರ್. ಜೀನಿಯಸ್ ಹಾಗೆ ಉಕ್ಕಿ ಹರಿದಿರುವುದು ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ಯುದ್ದಕ್ಕೂ ಕಾಣುತ್ತದೆ.

ನನ್ನ ತಿಳಿವಳಿಕೆಯ ಪ್ರಕಾರ, ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಕನ್ನಡದ ಅತ್ಯಂತ ಮಹತ್ವದ ಸಾಂಸ್ಕೃತಿಕ ಅಧ್ಯಯನ ಹಾಗೂ ಪ್ರಾಯಶಃ ಕನ್ನಡದ ಮೊದಲ ಪೂರ್ಣ ಪ್ರಮಾಣದ ಲಿಟರರಿ ಥಿಯರಿಯ ಪುಸ್ತಕ. ಇಲ್ಲಿ ಡಿ.ಆರ್. ಸಾಧಿಸಿರುವ ಥಿಯರೈಸೇಶನ್‌ನ ವ್ಯಾಪ್ತಿ; ಸಾಹಿತ್ಯಕೃತಿಗಳ ವ್ಯಾಖ್ಯಾನಗಳು; ದಾರ್ಶನಿಕ ವಾಗ್ವಾದಗಳ ಗ್ರಹಿಕೆ; ಕಾವ್ಯಮೀಮಾಂಸೆಗಳ ಸಂಘರ್ಷಗಳು ಕ್ರಮೇಣ ಸಾಮಾಜಿಕ ಸಂಘರ್ಷಗಳಾಗುವುದನ್ನು ವ್ಯಾಖ್ಯಾನಿಸುವ ಕ್ರಮ; ಅಲ್ಲಮಕಿಟಕಿಯ ಮೂಲಕ ವಿಶ್ವಸಾಹಿತ್ಯದ ಗ್ರಹಿಕೆಗಳು; ವಚನ ಸಾಹಿತ್ಯ-ಶೂನ್ಯ ಸಂಪಾದನೆ-ಮಂಟೇಸ್ವಾಮಿ ಕಾವ್ಯ- ಈ ಎಲ್ಲ ಪಠ್ಯಗಳ ನಡುವಿನ ಕೊಂಡಿಗಳು ಹಾಗೂ ಭಿನ್ನತೆಗಳು; ಒಟ್ಟಾರೆಯಾಗಿ ಕಾವ್ಯ ಕುರಿತ ವ್ಯಾಪಕ ವ್ಯಾಖ್ಯಾನಗಳು ಮತ್ತು ಅದ್ಭುತವಾದ ಓದಿನ ಕ್ರಮಗಳು- ಈ ಎಲ್ಲದರಲ್ಲೂ ಡಿ.ಆರ್. ತಲುಪಿರುವ ಎತ್ತರ ಕನ್ನಡದ ಮಟ್ಟಿಗಂತೂ ಅಪೂರ್ವವಾಗಿದೆ. ಡಿ.ಆರ್. ಈ ಪುಸ್ತಕ ಬರೆಯುವ ಮೊದಲೇ ಜಗತ್ತಿನ ನಿರ್ವಸಾಹತೀಕರಣ ಚಿಂತಕರನ್ನು ಹಾಗೂ ಭಾರತದ ವಿವಿಧ ಭಾಷೆಗಳ ಬಗೆಬಗೆಯ ಸಂಸ್ಕೃತಿ ಚಿಂತಕರನ್ನು ಮುಖಾಮುಖಿಯಾಗಿದ್ದರು. ಸ್ವತಃ ತಾವೇ ಇಂಡಿಯಾದ ಮಹತ್ವದ ನಿರ್ವಸಾಹತೀಕರಣ ಚಿಂತಕರಾಗಿ ರೂಪುಗೊಂಡಿದ್ದರು…’

ಡಿ. ಆರ್. ನಾಗರಾಜರನ್ನು ಹಿಡಿದ ಅಲ್ಲಮ ಗುಂಗು ಗೆಳೆಯ ಎನ್. ಎಸ್. ಗುಂಡೂರರನ್ನು ಐದಾರು ವರ್ಷಗಳ ಕೆಳಗೆ ಅಮರಿಕೊಂಡಿತು. 'ಅಲ್ಲಮಪ್ರಭು ಮತ್ತು ಶೈವಪ್ರತಿಭೆ' ಅನುವಾದಕ್ಕಾಗಿ ‘ನ್ಯೂ ಇಂಡಿಯಾ ಟ್ರಾನ್ಸ್‌ಲೇಶನ್ ಫೆಲೋಶಿಪ್’ ಸಿಕ್ಕಿದ ಮೇಲೆ ಗುಂಡೂರ್ ಹಗಲೂರಾತ್ರಿ ಈ ಪಠ್ಯದೊಂದಿಗೆ ಸೆಣಸುತ್ತಿದ್ದರು. ಆಗಿನ ಒಂದು ಸಂಜೆಯ ಟೆಲಿಫೋನ್ ಮಾತುಕತೆಯಲ್ಲಿ 'ನೀವು ಎಷ್ಟರಮಟ್ಟಿಗೆ ಈ ಪುಸ್ತಕವನ್ನು ಇಂಗ್ಲಿಷಿನಲ್ಲಿ ಹಿಡಿಯುತ್ತೀರೋ ಗೊತ್ತಿಲ್ಲ... ಆದರೆ ಈ ಬೌದ್ಧಿಕ ಸಾಹಸದಲ್ಲಿ ಮುಳುಗಿದಷ್ಟೂ, ನೀವು ಈ ಥಿಯರಿಟಿಕಲ್ ಪಠ್ಯದ ಜೊತೆಗೆ ಸೆಣಸಿದಷ್ಟೂ, ನಿಮ್ಮ ಅಕಡೆಮಿಕ್-ಇಂಟಲೆಕ್ಚುಯಲ್ ವ್ಯಕ್ತಿತ್ವಕ್ಕೆ ಅಪಾರ ಅನುಕೂಲವಾಗುತ್ತದೆ...' ಮುಂತಾಗಿ ಹೇಳಿದ ನೆನಪು. ಸರಿ! ನೋಡನೋಡುತ್ತಿರುವಂತೆಯೇ, ಗುಂಡೂರ್ ಒಂಥರದ ವಚನಜೀವಿಯಾದರು. ತಲೆಕೂದಲು ಬೆಳೆಯುತ್ತ ಬೆಳೆಯುತ್ತ ಜಟೆಯಾಗುವ ಹಂತ ಮುಟ್ಟಿತು. ಪ್ಯಾಶನೇಟ್ ಮೇಷ್ಟರಾದರು. ನಿದ್ದೆ ಎಚ್ಚರಗಳಲ್ಲಿ ಅಲ್ಲಮ…  

ಕಳೆದ ಐದು ವರ್ಷಗಳ ಶ್ರಮದ ಫಲವಾಗಿ 'ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ'ಯ ಇಂಗ್ಲಿಷ್ ಮರುಜನ್ಮ Allama Prabhu and the Shaiva Imagination (ಪರ್ಮನೆಂಟ್ ಬ್ಲಾಕ್, ರೂ ೧೨೫೦) ಪುಸ್ತಕ ನನ್ನೆದುರಿಗಿದೆ. ೧೯೯೭-೯೮ರ ನಡುವೆ ಡಿ.ಆರ್. ನಾಗರಾಜ್ ಆಗಾಗ ಬರೆದ ಪುಸ್ತಕ ೨೦೨೬ರಲ್ಲಿ ಇಂಗ್ಲಿಷಿನಲ್ಲಿ ಮರುಹುಟ್ಟು ಪಡೆದಿದೆ. ಇದು ಮರುಹುಟ್ಟು ಎನ್ನಲು ಕಾರಣವಿದೆ. ಇದು ಅನುವಾದವಲ್ಲ; ಒಂದರ್ಥದಲ್ಲಿ ಮರುರಚನೆ. ಡಿ. ಆರ್‍. ಗೆ ಪ್ರಿಯವಾದ ‘ಕಥನ’ ಎಂಬ ಪದವನ್ನೇ ಬಳಸಿ ಹೇಳುವುದಾದರೆ, ಇದು ‘ಮರುಕಥನ’. ಇದನ್ನು ಕೇವಲ ‘ಎಡಿಟೆಡ್ ಅಂಡ್ ಟ್ರಾನ್ಸ್ಲೇಟೆಡ್’ ಪುಸ್ತಕ ಎಂದೋ, ‘ಅನ್ನೋಟೇಟೆಡ್ ಎಡಿಶನ್’ ಎಂದೋ ಹೇಳಿದರೆ ಸರಿಯಾಗದು. ಇದು ಸ್ವತಃ ಡಿ. ಆರ್‍. ವಿವರಿಸಬೇಕಾಗಿದ್ದ ಹಲವು ಭಾಗಗಳನ್ನು ವಿವರಿಸಿದೆ. ಪಠ್ಯವನ್ನು ಅಲ್ಲಲ್ಲಿ ಮುರಿದು ಕಟ್ಟಿದೆ. ಓದಲು ತಕ್ಕ ರೆಫರೆನ್ಸುಗಳನ್ನು ಕೊಟ್ಟು, ಇಂಗ್ಲಿಷ್ ಓದುಗ ಓದುಗಿಯರ ಓದಿಗೆ ನೆರವಾಗಿದೆ. ಈ ಪುಸ್ತಕವನ್ನು ಮತ್ತೆ ಕನ್ನಡದಲ್ಲಿ ಮರುಮುದ್ರಿಸುವವರು ಈ ಪುಸ್ತಕದ ಮಾದರಿಯನ್ನು ಅನುಸರಿಸಿದರೆ, ಈ ಮಹತ್ವದ ಕನ್ನಡ ಪುಸ್ತಕ ಇನ್ನಷ್ಟು ಸ್ಪಷ್ಟವಾಗಿ ಓದುಗಿ-ಓದುಗರ ದಕ್ಕಬಲ್ಲದು. ಗುಂಡೂರ್ ಮುನ್ನುಡಿ ಅಲ್ಲಮ-ಡಿ.ಆರ್. ಸಂಬಂಧವನ್ನು ಸಮರ್ಥವಾಗಿ, ವಿಸ್ತೃತವಾಗಿ ವಿವರಿಸಿದೆ. ಈ ಕೃತಿ ಮೈದಾಳುವ ಕಾಲದಲ್ಲೇ ಇಲ್ಲಿನ ಕೆಲವು ಭಾಗಗಳನ್ನು ಓದಿದ್ದ ನಾನು ಈಗ ಕೃತಿಯ ಸ್ವರೂಪದ ಬಗೆಗಷ್ಟೇ ಹೇಳಿದ್ಧೇನೆ. ಕೃತಿಯ ಒಳಹೂರಣ ಕುರಿತು ವಿವರವಾಗಿ ಬರೆಯುವ ಹೊಣೆ ಈ ಕ್ಷೇತ್ರದಲ್ಲಿ ನುರಿತ ವಿದ್ವಾಂಸರದು.

ಈ ಕಾಲದ ದೊಡ್ಡ ವಿದ್ವಾಂಸ ಶೆಲ್ಡನ್ ಪೊಲಾಕ್ ಈ ಪುಸ್ತಕ ಬರುವ ಮುನ್ನವೇ ಇದರ ಕರಡು ಪ್ರತಿ ಓದಿ ಉತ್ಸಾಹದಿಂದ ಬರೆದದ್ದರ ಸಾರಾಂಶ: 

‘೧೯೯೮ರಲ್ಲಿ ಡಿ. ಆರ್. ನಾಗರಾಜ್ ತಮ್ಮ ನಲವತ್ತನೆಯ ವಯಸ್ಸಿನಲ್ಲಿ ತೀರಿಕೊಂಡಾಗ ಇಂಡಿಯಾ ಮತ್ತು ಈ ಜಗತ್ತು ಒರಿಜಿನಾಲಿಟಿ, ಒಳನೋಟ, ಸೂಕ್ಷ್ಮತೆಗಳ ಒಬ್ಬ ಅತಿವಿಶಿಷ್ಟ ಚಿಂತಕನನ್ನು ಕಳೆದುಕೊಂಡಿತು.  ‘ಏಕಕಾಲಕ್ಕೆ ಬರ್ಬರತೆಯ ದಾಖಲೆಯೂ ಆಗಿರದ ಒಂದು ನಾಗರಿಕತೆಯ ದಾಖಲೆಯೇ ಇರಲಾರದು’ ಎಂದಿದ್ದ ವಾಲ್ಟರ್ ಬೆಂಝಮಿನ್‌ನಷ್ಟೇ ಆಳವಾಗಿ ಈ ಅಂಶವನ್ನು ಡಿ. ಆರ್. ಕೂಡ ಅರಿತಿದ್ದರು. ಜಾತೀಯ ಹಿಂಸೆಯ ಆಳ ಹಾಗೂ ಕಾವ್ಯ, ಫಿಲಾಸಫಿಗಳ ಎತ್ತರ ಎರಡನ್ನೂ ಓದುಗರ ಎದೆಗೆ ಮುಟ್ಟಿಸುವಲ್ಲಿ ಡಿ.ಆರ್.ಗೆ ತನ್ನದೇ ಆದ ಮಾರ್ಗವೂ ಇತ್ತು. ವೀರಶೈವ ಮಾಸ್ಟರುಗಳಲ್ಲಿ ಅತ್ಯಂತ ಮುಖ್ಯನಾದ, ಅತ್ಯಂತ ನಿಗೂಢನಾದ ಅಲ್ಲಮ ಕೊನೆಗೂ ಇಂಗ್ಲಿಷ್ ಓದುಗರಿಗೆ ದೊರೆತಿರುವುದು ಒಂದು ಬೆಲೆಬಾಳುವ ಉಡುಗೊರೆಯಾಗಿದೆ; ಈ ಕಾರಣಕ್ಕಾಗಿ ನಾವು ಎನ್ ಎಸ್ ಗುಂಡೂರ್‍ ಅವರಿಗೆ ಆಳದಲ್ಲಿ ಕೃತಜ್ಞರಾಗಿದ್ದೇವೆ. ಅವರ ಈ ಎಡಿಶನ್-ಟ್ರಾನ್ಸಲೇಶನ್ ಕೇವಲ ಹೋಮೇಜ್ ಅಥವಾ ಗೌರವಾರ್ಪಣೆ ಮಾತ್ರವಲ್ಲ, ಅದು ತಂತಾನೇ ಸಾಹಿತ್ಯಕ ಮತ್ತು ಚಾರಿತ್ರಿಕ ವಿದ್ವಾಂಸಲೋಕಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.’ 

ಈ ಅಂಕಣಕ್ಕೆ ಟಿಪ್ಪಣಿ ಮಾಡುವ ದಿನ ಡಿ. ಆರ್. ನಾಗರಾಜರ ಮಿತ್ರರೂ ಆಗಿದ್ದ ಸಂಸ್ಕೃತಿ ಚಿಂತಕ ಯೋಗೇಂದ್ರ ಯಾದವ್ ‘ಇಂಡಿಯನ್ ಎಕ್ಸ್‌ಪ್ರೆಸ್’ ಮಾತುಕತೆಯ ವಿಡಿಯೋದಲ್ಲಿ ಪುಸ್ತಕದ ಮಹತ್ವ ಕುರಿತು ಉತ್ಸಾಹದಿಂದ ಮಾತಾಡಿದರು. ತಮ್ಮ ಅಂಕಣದಲ್ಲೂ ಈ ಬಗ್ಗೆ ಬರೆದರು. ಈ ಕೃತಿಗೆ ಗುಂಡೂರ್‍ ಬರೆದಿರುವ ವಿಸ್ತೃತ, ಗಂಭೀರ ಮುನ್ನುಡಿ ಅವಶ್ಯವಾಗಿ ಕನ್ನಡಕ್ಕೆ ಬರಬೇಕು; ಮುಂದೆ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಪುಸ್ತಕ ಪ್ರಕಟವಾಗುವಾಗ ಈ ಕನ್ನಡ ರೂಪವೂ ಅದರ ಜೊತೆಗಿದ್ದರೆ ಡಿ. ಆರ್‍. ಪುಸ್ತಕವನ್ನು ಇನ್ನಷ್ಟು ಚೆನ್ನಾಗಿ ಅರಿಯಲು ಹೊಸ ಹೊಸ ತಲೆಮಾರುಗಳಿಗೆ ನೆರವಾಗಬಲ್ಲದು.  

ಕಳೆದ ವಾರ ಸಿಕ್ಕ ಈ ಇಂಗ್ಲಿಷ್ ಪುಸ್ತಕದ ಸುಂದರ ಪ್ರೊಡಕ್ಷನ್ನನ್ನು ತಿರುವಿ ಹಾಕುತ್ತಾ ನೇವರಿಸುತ್ತಿದ್ದಾಗ (ಈ ಕೋಮಲ ವರ್ಣನೆ ಸೂಕ್ಷ್ಮಾತಿಸೂಕ್ಷ್ಮ ಓದುಗಿಯರಲ್ಲಿ ನಗೆ ಉಕ್ಕಿಸದಿರಲಿ!) ವಿಷಾದದ ಮಾತೊಂದು ಥಟ್ಟನೆ ನನ್ನಲ್ಲಿ ಉಕ್ಕಿತು: 'ಅಯ್ಯೋ! ಡಿ.ಆರ್. ಇದ್ದಿದ್ದರೆ ಈ ಪುಸ್ತಕ ನೋಡಿ ಎಷ್ಟು ಆನಂದ ಪಡುತ್ತಿದ್ದರೋ!’ ಮನ ಪೆಚ್ಚಾಯಿತು.  ಎಂಬತ್ತು-ತೊಂಬತ್ತರ ದಶಕದಲ್ಲಿ ಅಶೀಶ್ ನಂದಿ ಥರದವರ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ 'ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್'ನ ಪ್ರೊಡಕ್ಷನ್ನುಗಳನ್ನು ಇಷ್ಟಪಡುತ್ತಿದ್ದ ಡಿ.ಆರ್. ಪರ್ಮನೆಂಟ್ ಬ್ಲಾಕಿನ ಈ ದಕ್ಷ ಪ್ರಕಟಣೆಯನ್ನು ಸಂಭ್ರಮದಿಂದ ಸೆಲೆಬ್ರೇಟ್ ಮಾಡುತ್ತಿದ್ದರು ಎಂದು ಸಕಾರಣವಾಗಿ ಊಹಿಸುವೆ. ತೀರಿಕೊಂಡ ದೊಡ್ಡ ಕನ್ನಡ ವಿದ್ವಾಂಸ-ಲೇಖಕರೊಬ್ಬರಿಗೆ ಅನಂತರದ ವಿದ್ವಾಂಸರು ಮಾಡಬೇಕಾದ ಕರ್ತವ್ಯ ಎಂಥದು ಎಂಬುದಕ್ಕೂ ಈ ಪುಸ್ತಕ ಅನುಕರಣಾರ್ಹ ಮಾದರಿಯಂತಿದೆ. ಇಂಥ ಮಹತ್ತರ ಕೆಲಸಗಳು ಫೆಲೋಶಿಪ್ಪುಗಳ ಮರ್ಜಿಗಳನ್ನು ಕಾಯದೆಯೂ ನಡೆಯುತ್ತಿರಬೇಕು ಎಂದಷ್ಟೇ ಸೂಚಿಸಬಯಸುವೆ!

ಇದೆಲ್ಲವನ್ನೂ ಕುರಿತು ಬರೆಯುತ್ತಿರುವಾಗ ಯಾಕೋ ಬಸವಣ್ಣನ ವಚನವೊಂದು ನೆನಪಾಯಿತು:

ಓದಿನ ಹಿರಿಯರು ವೇದದ ಹಿರಿಯರು 
ಶಾಸ್ತ್ರದ ಹಿರಿಯರು ಪುರಾಣದ ಹಿರಿಯರು 
ವೇಷದ ಹಿರಿಯರು ಭಾಷೆಯ ಹಿರಿಯರು 
ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ; 
ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ 
ನಮ್ಮ ಕೂಡಲಸಂಗಮದೇವರು.

ಲೇಖಕನೊಬ್ಬ ತೀರಿಕೊಂಡ ನಂತರ ಅವನನ್ನು ಕುರಿತು ಬರೆಯುವ ಓದಿನ ಹಿರಿಯರು, ಭಾಷೆಯ ಹಿರಿಯರು, ಶಾಸ್ತ್ರದ ಹಿರಿಯರು ಅವನ ಮಹತ್ವದ ಪುಸ್ತಕಗಳನ್ನು ಮುನ್ನೆಲೆಗೆ ತರುವ, ಒಳ್ಳೆಯ ಅರ್ಥದಲ್ಲಿ ‘ಮೆರೆಸ’ಬೇಕಾದದ್ದನ್ನು ಕುರಿತ ಸೂಚಿತಾರ್ಥವನ್ನೂ ಈ ವಚನ ನನ್ನಲ್ಲಿ ಹೊರಡಿಸುತ್ತಿರುತ್ತದೆ. ಈ ಸುಂದರ ಕೆಲಸವನ್ನೂ ಗುಂಡೂರ್‍ ಮಾಡಿದ್ದಾರೆ. ಈ ಪುಸ್ತಕದ ರಚನೆಯ ಜೊತೆಗೆ ಡಿ. ಆರ್‍. ಅವರ ಸಮಸ್ತ ಬರವಣಿಗೆಯನ್ನೂ ಪರಿಚಯಿಸಿಕೊಂಡಿರುವಂತೆ ತೋರುವ ಗುಂಡೂರ್‍‌ಗೆ ಡಿ. ಆರ್‍. ಅವರ ವಿದ್ವಾಂಸ ವ್ಯಕ್ತಿತ್ತ್ವದ ವಿದ್ವತ್ತು, ತಾತ್ವಿಕ ಸ್ಪಷ್ಟತೆ, ಸಿದ್ಧಾಂತಗಳ ತಳಹದಿ, ನಿಷ್ಠುರ ಶೋಧನೆಯ ಆಳ ಅಗಲ, ಸಾಹಿತ್ಯದ ತೀವ್ರ ಓದಿನಿಂದ  ಡಿ. ಆರ್.ಗೆ ಸಿಕ್ಕ ತೀವ್ರತೆ ಇವೆಲ್ಲವೂ ದಕ್ಕುವಂತಾಗಲಿ. ಈ ಪುಸ್ತಕ ಗುಂಡೂರ್‍ ವ್ಯಕ್ತಿತ್ವಕ್ಕೆ ಗಟ್ಟಿತನ ತರಲಿ ಎಂದು ಪ್ರೀತಿಯಿಂದ ಹಾರೈಸುವೆ. ಅದರ ಜೊತೆಗೇ, ಇದೇ ಅಂಕಣದಲ್ಲಿ ಹಿಂದೊಮ್ಮೆ ಉಲ್ಲೇಖಿಸಿದ ಹರಿಹರನ ‘ಮನುಜರ ಮೇಲೆ ಸಾವವರ ಮೇಲೆ’ ಬರೆಯುವ ಕುರಿತಾದ ಎಚ್ಚರದ ಹಿನ್ನೆಲೆಯಲ್ಲಿ, ಕೃತಜ್ಞತೆಯ ಹುಸಿ-ನಿಜ ವಿಶೇಷಣಗಳ ಹೆಣಭಾರದಲ್ಲಿ ಈ ಇಂಗ್ಲಿಷ್ ಪ್ರೊಫೆಸರ್ ನೊಗ ಮುರಿಯದಿರಲಿ ಎಂದು ಕೂಡ ಕಿವಿಮಾತು ಹೇಳುವೆ! 
  
 

Share on:

Comments

6 Comments



| ಹಳೆಮನೆ ರಾಜಶೇಖರ

ಪ್ರೊ. ಗುಂಡೂರ್ ಸಾರ್ ಗೆ ಅಭಿನಂದನೆಗಳು ನಾನು ಅಲ್ಲಮ ಪ್ರಭು ಶೈವ ಪ್ರತಿಭೆ ಪುಸ್ತಕ ಅನೇಕ ಸಾರಿ ಓದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಆ ಕೃತಿ ಇಂಗ್ಲಿಷ್ ಭಾಷೆಗೆ ಹೋದದ್ದು ಬಹಳ ಸಂತೋಷ. ಮಹಾ ಪ್ರತಿಭೆ ಪ್ರೊ. ಡಿ ಆರ್ ನಾಗರಾಜ ಸಾರ್ ಕುರಿತ ತಮ್ಮ ಬರಹಗಳು ನಮಗೆ ತುಂಬಾ ಇಷ್ಟವಾಗುತ್ತವೆ


| Kumsi Umesh

ಈ ಬರಹ ಅಲ್ಲಮ ಓದಿಗೆ ಪೂರಕ..


| Rajappa Dalavayi

ಬುಕ್ ರಿವ್ಯೂ ಚನ್ನಾಗಿದೆ. ತತ್ವ ಮತ್ತು ಭಾಷೆ ಕುರಿತು ಅಲ್ಲಮನನ್ನು ಗ್ರಹಿಸುತ್ತಿದ್ದ ಕಾಲಕ್ಕೆ ನನಗೆ ನಿಮ್ಮ ಈ ಲೇಖನ ಹೊಸ ಸತ್ವ ಕೊಟ್ಟಂತೆ ಆಯಿತು. ಬಸವಣ್ಣನ ವಚನ ಸಕಾಲಿಕ. ಗುಂಡೂರ್ ಕೆಲಸ, ಎಚ್ಚರ ಎರಡನ್ನು ಅದ್ಭುತವಾಗಿ ವ್ಯಾಖ್ಯಾಣಿಸಿದ್ದೀರಿ.


| Chandrashekhara Talya

ಅಲ್ಲಮನ ಗುಂಗಿನೊಳಗೆ ನಾನೂ ಮುಳುಗಿದವನೆ, ಬಸವ ಪ್ರಜ್ಞೆಯನ್ನು ವಿಸ್ತರಿಸಿ ಅದಕ್ಕೊಂದು ತಾತ್ತ್ವಿಕ ಪೂರ್ಣತೆಯನ್ನು ತಂದುಕೊಟ್ಟ ಅಪೂರ್ವ ಪ್ರತಿಭೆ ಅಲ್ಲಮ. ಡಿ ಆರ್ ಅವರ ವಿಶ್ವಪ್ರಜ್ಞೆ ಮತ್ತು ಕನ್ನಡ ಪ್ರಜ್ಞೆಯನ್ನು ಇಂಗ್ಲಿಷ್ ಪ್ರಪಂಚಕ್ಕೆ ತಲುಪಿಸುವ ಮಹತ್ವದ ಕಾರ್ಯವನ್ನು ಗುಂಡೂರ್ ಮಾಡಿದ್ದಾರೆ, ಆ ಮೂಲಕ ನಮ್ಮ ಪರಂಪರೆಯ ಮಹತ್ವದ ಚಿಂತಕನ ಋಣವನ್ನು ತೀರಿಸಿದ್ದಾರೆ. ಅವರಿಗೆ ಕನ್ನಡ ಕುಲಕೋಟಿ ಆಭಾರಿಯಾಗಿರಬೇಕು.ನಿಮ್ಮ ಬರಹ ಸಾಂಕೇತಿಕವಾಗಿ ಆ ಕೆಲಸವನ್ನು ಮುಂದಾಗಿ ಮಾಡಿದೆ.


| MANOJ C R

ನಮ್ಮೆಲ್ಲೇರ ಪ್ರೀತಿಯ ಗುಂಡುರ್ ಸರ್ ನಾನು ಸುಮಾರ್ ಸರಿ ಹೇಳಿದ್ದೇನೆ ಹಾಗೂ ಬರೆದಿದ್ದೇನೆ ಕೂಡ. ನಮ್ಮ ಈ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಡಿಪಾರ್ಟ್ಮೆಂಟ್ಗೆ ಏನಾದರೂ ಒಂದು ಒಳ್ಳೆ ವ್ಯಾಲ್ಯೂ ಮೌಲ್ಯ ಇದೆ ಅಂದ್ರೆ ಅದು ನಿಮ್ಮಿಂದ ಮಾತ್ರ.. ಇದು ಅತಿಷಿಯೋಕ್ತಿ ಅಲ್ಲ. ಈ ಮಾತನ್ನೇ ಎಲ್ಲಿಂದೆಲ್ಲ ಬಂದ ಎಲ್ಲ V C ಗಳು ಒಪ್ಪಿದ್ದಾರೆ... ಒಪ್ಪಲೇಬೇಕು..!₹ ನಾವೆಲ್ಲರೂ ಕೆಲವೊಮ್ಮೆ ವಿಚಾರ ಮಾಡುತ್ತವೆ ಸಾರ್.. ಇನ್ ಕೇಸ್ ಏನಾದರೂ ಗುಂಡೂರು ಸರ್ ಇಲ್ಲ ಅಂದಿದ್ರೆ ...... ನಮ್ಮ ತುಮಕೂರು ವಿಶ್ವವಿದ್ಯಾನಿಲಯದ್ದಲ್ಲಿ PG classes ಮಾಮೂಲಿ ಕಾಲೇಜಿನಂತೆ ಇರುತ್ತಿತ್ತು ಯುನಿವರ್ಸಿಟಿ ಟಚ್ ಅಂತ ಏನಾದ್ರು ಬಂದಿದ್ರೆ ಅದು ನೀವು ಬಂದ ಮೇಲೆನೇ ಸರ್ ....!! Or else.. Just one open challenge..... Tumkur university li Gundur sir ಗಿಂತ ಓದಿಕೊಂಡೋವ್ರು ಯಾರು ಅಂತ ನೀವೇ judge ಮಾಡಿ and comment madi..


| Dhanush H shekar

ಅಲ್ಲಮನ ಗುಂಗು ಅದೊಂದು ಬಿಟ್ಟು ಬಿಡದ ಮಾಯೆ. ಅಲ್ಲಮನ ಬಗೆಗೆ ಅವನ ಗುಂಗು ಹಿಡಿದು ನಡೆದ ಡಿ ಆರ್ ಅವರ ಬಗೆಗೆ, ಅದೇ ದಾರಿಯಲ್ಲಿ ಸಾಗುತ್ತಿರುವ ಗುಂಡೂರರ ಬಗೆಗೆ ಅರ್ಥಪೂರ್ಣ ಮಾತುಗಳನ್ನು ಬರೆದ ನಿಮಗೆ ಧನ್ಯವಾದಗಳು ಸರ್




Add Comment


Mundana Kathana Nataka

YouTube






Recent Posts

Latest Blogs